ಚಾಮರಾಜನಗರ: ಆಹಾರ ಅರಸಿ ನಾಡಿಗೆ ಬಂದ ಆನೆ ಮರಿಯೊಂದು ವಿದ್ಯುತ್ ಶಾಕ್ ಗೆ ಬಲಿಯಾಗಿದೆ.
ಈ ಘಟನೆ ಗುಂಡ್ಲುಪೇಟೆ ತಾಲೂಕಿನ ಮಂಗಲ ಗ್ರಾಮದ ಕಾಡಂಚಿನಲ್ಲಿ ನಡೆದಿದೆ. ಷರೀಪ್ ಖಾನ್ ಎಂಬುವವರ ಜಮೀನಿನಲ್ಲಿ ಈ ಘಟನೆ ನಡೆದಿದೆ.
ಜಮೀನಿನಲ್ಲಿ ಅಕ್ರಮವಾಗಿ ಹರಿಸಿದ್ದ ವಿದ್ಯುತ್ ತಂತಿಯಿಂದ ಈ ಅವಘಡ ಸಂಭವಿಸಿದೆ. ಸಾವನ್ನಪ್ಪಿದ ಗಂಡು ಆನೆ ಮರಿ 1 ರಿಂದ 2 ವರ್ಷ ವಯಸ್ಸಿನದ್ದಾಗಿತ್ತು ಎಂದು ಅಂದಾಜಿಸಲಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯ ವ್ಯಾಪ್ತಿಯ ಮಂಗಲ ಗ್ರಾಮದ ಹುಲಿಯಮ್ಮನ ಗುಡಿಯ ರಸ್ತೆಯಲ್ಲಿ ಷರೀಪ್ ಎಂಬವರು ತಮ್ಮ ಜಮೀನಿನಲ್ಲಿ ರಾಗಿ ಬೆಳೆದಿತ್ತು. ರೈತರು ಬೆಳೆಯ ರಕ್ಷಣೆಗಾಗಿ ವಿದ್ಯುತ್ ತಂತಿ ಅಳವಡಿಸಿದ್ದರು. ಈ ವೇಳೆ ಹೊಲಕ್ಕೆ ನುಗ್ಗಲು ಆನೆ ಪ್ರಯತ್ನಿಸಿದೆ. ಆಗ ಆನೆ ಮರಿಗೆ ವಿದ್ಯುತ್ ತಗುಲಿ ಸಾವನ್ನಪ್ಪಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.