ಬೆಳಗಾವಿ: ಸಿಎಂ ಸಿದ್ದರಾಮಯ್ಯ ಅವರ ಹೊಡೆತಕ್ಕೆ ಬಿಜೆಪಿ ಶೇಕ್ ಆಗುತ್ತಿದೆ ಎಂದು ಸಚಿವ ಶಿವರಾಜ ತಂಗಡಗಿ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರಾಜ್ಯಕ್ಕೆ ಸಿದ್ದರಾಮಯ್ಯ ಅವರ ಕೊಡುಗೆ ಸಾಕಷ್ಟಿದೆ. ಲಕ್ಷಾಂತರ ಬಡ ಕುಟುಂಬಗಳು ಸಿದ್ದರಾಮಯ್ಯ ಅವರ ಹಲವಾರು ಯೋಜನೆಗಳಿಂದ ನೆಮ್ಮದಿಯ ಬದುಕು ಕಟ್ಟಿಕೊಂಡಿವೆ. ಹೀಗಾಗಿ ಅವರೆಲ್ಲರ ಆಶೀರ್ವಾದ ಸಿಎಂ ಅವರ ಮೇಲಿದೆ. ಅಲ್ಲದೇ, ಸಿಎಂ 40 ವರ್ಷಗಳಿಂದಲೂ ಪ್ರಾಮಾಣಿಕ ರಾಜಕಾರಣ ಮಾಡುತ್ತ ಬಂದವರು. ಇದಕ್ಕೆ ಅವರು ಅಂಜುವ ಮಾತೇ ಇಲ್ಲ ಎಂದು ಹೇಳಿದ್ದಾರೆ.
ಸಿಎಂ ವಿರುದ್ಧ ಕೇಸ್ ಹಾಕಿದ್ದಕ್ಕೆ ರಾಜ್ಯದ ಜನರು ಬೇಸರಿಸಿಕೊಂಡಿದ್ದಾರೆ ಎನ್ನುವುದು ಚುನಾವಣೆಯ ಮೂಲಕ ಸಾಬೀತಾಗಿದೆ. ಮೈಸೂರು ಭಾಗ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಮೂರು ಭಾಗಗಳಲ್ಲಿ ಗೆದ್ದಿದ್ದೇವೆ. ಜನರೇ ತೀರ್ಪು ಕೊಟ್ಟ ಮೇಲೆ ಇವರ ಪರಿಸ್ಥಿತಿ ಏನಾಗಿದೆ? ಇನ್ನಾದರೂ ಬಿಜೆಪಿ ಹಾಗೂ ಜೆಡಿಎಸ್ ತಮ್ಮ ವರ್ತನೆ ತಿದ್ದಿಕೊಳ್ಳಬೇಕು ಎಂದಿದ್ದಾರೆ.