ವಿಜಯನಗರ: ಐದು ಗ್ಯಾರಂಟಿಗಳಿಂದಾಗಿಯೇ ಕಾಂಗ್ರೆಸ್ ರಾಜ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ. ಅಲ್ಲದೇ, ಉಪ ಚುನಾವಣೆಯಲ್ಲಿ ಕೂಡ ಈ ಗ್ಯಾರಂಟಿಗಳ ಕೈ ಹಿಡಿದಿವೆ. ಅಷ್ಟೇ ಅಲ್ಲ, ಕಾಂಗ್ರೆಸ್ ನ ಪಂಚ ಗ್ಯಾರಂಟಿ ಈಗ ದೇಶದಲ್ಲಿ ದೊಡ್ಡ ಅಲೆ ಬೀಸಿದ್ದು, ಎಲ್ಲ ಚುನಾವಣೆಗಳಲ್ಲೂ ಸದ್ದು ಮಾಡುತ್ತಿವೆ. ಈ ಮಧ್ಯೆ ಕಾಂಗ್ರೆಸ್ ನ ಶಾಸಕರೊಬ್ಬರು ಅಪಸ್ವರ ಎತ್ತಿದ್ದಾರೆ.
ಐದು ಗ್ಯಾರಂಟಿಗಳಲ್ಲಿ ಎರಡನ್ನು ಕೈ ಬಿಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಕ್ಷದ ಶಾಸಕ ಗವಿಯಪ್ಪ ಆಗ್ರಹಿಸಿದ್ದಾರೆ.
ಹೊಸಪೇಟೆಯ ಇಪ್ಪಿತೇರಿ ಮಾಗಾಣಿಯಲ್ಲಿ ನಡೆದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳಿಂದ ಆಶ್ರಯ ಮನೆಗಳು ಬರುತ್ತಿಲ್ಲ. ಅಭಿವೃದ್ಧಿ ಕೆಲಸಗಳಿಗೆ ಅನುದಾನ ಬರುತ್ತಿಲ್ಲ. ಇದರಿಂದಾಗಿ ಜನರು ನಮ್ಮ ಮೇಲೆ ಅಸಮಾಧಾನ ಹೊರ ಹಾಕುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಶಕ್ತಿ ಯೋಜನೆ ಸೇರಿದಂತೆ ಎರಡು ಗ್ಯಾರಂಟಿಗಳನ್ನು ಸರ್ಕಾರ ಕೈ ಬಿಡಬೇಕು ಎಂದು ಮಾತನಾಡಿದ್ದಾರೆ. ಸದ್ಯ ಈ ಹೇಳಿಕೆ ದೊಡ್ಡ ಚರ್ಚೆಗೆ ಕಾರಣವಾಗುತ್ತಿದೆ.