ಬೆಂಗಳೂರು : ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಹೀಗಾಗಿ ರಾಜ್ಯ ಬಿಜೆಪಿ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬಿಜೆಪಿ ತೆಕ್ಕೆಯಲ್ಲಿದ್ದ ಶಿಗ್ಗಾವಿಯನ್ನು ಕೂಡ ಗೆಲ್ಲುವಲ್ಲಿ ಬಿಜೆಪಿ ವಿಫಲವಾಗಿತ್ತು. ಇದು ರಾಜ್ಯ ನಾಯಕರನ್ನು ಕಂಗೆಡಿಸಿದೆ. ಹಾಗಾಗಿ ಸೋಲಿನ ಪರಾಮರ್ಶೆಯನ್ನು ಗಂಭೀರವಾಗಿ ನಡೆಸಿ ಪಕ್ಷದಲ್ಲಿ ಆಗಬೇಕಿರುವ ಬದಲಾವಣೆ, ಸುಧಾರಣೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ ಮುನ್ನಡೆಯಲು ರಾಜ್ಯ ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಸ್ವಪಕ್ಷೀಯ ನಾಯಕರ ವಿರುದ್ಧ ನಿರಂತರವಾಗಿ ಹರಿಹಾಯುತ್ತಿರುವ ಯತ್ನಾಳ್ ಅವರಿಗೆ ವರಿಷ್ಠರೇ ಕ್ರಮ ಜರುಗಿಸುವ ಮೂಲಕ ಇತರ ಅತೃಪ್ತ ಮುಖಂಡರಿಗೆ ಬಿಸಿ ಮುಟ್ಟಿಸುವ ಸಾಧ್ಯತೆ ಇದೆ. ಯತ್ನಾಳ್ ಅವರಿಗೆ ತಿಳಿ ಹೇಳುವ, ವಿಶ್ವಾಸ ತೆಗೆದುಕೊಳ್ಳುವ ಪ್ರಯತ್ನ ಫಲ ನೀಡದ ಕಾರಣ ವರಿಷ್ಠರ ಗಮನಕ್ಕೆ ತಂದು ಅಲ್ಲಿಂದಲೇ ಸರಿಪಡಿಸುವ ಪ್ರಯತ್ನಕ್ಕೆ ರಾಜ್ಯ ನಾಯಕತ್ವ ಯತ್ನಿಸುವ ಸಾಧ್ಯತೆ ಇದೆ.
ಪ್ರಮುಖ ಸಮುದಾಯಗಳು ಹಾಗೂ ಆ ಸಮುದಾಯಗಳ ನಾಯಕರನ್ನಷ್ಟೇ ನೆಚ್ಚಿಕೊಂಡರೆ ಚುನಾವಣೆ ಗೆಲ್ಲುವುದು ಅಸಾಧ್ಯ ಎಂಬ ಮಾತು ಪಕ್ಷದಲ್ಲಿ ವ್ಯಾಪಕವಾಗಿದೆ. ಪಕ್ಷದಲ್ಲಿ ಸಣ್ಣ ಪುಟ್ಟ, ಹಿಂದುಳಿದ ಸಮುದಾಯಗಳ ಸಮರ್ಥ ನಾಯಕತ್ವದ ಕೊರತೆಯೂ ಸಂಘಟನೆ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಎಲ್ಲ ಸಮುದಾಯಗಳ ಸಮರ್ಥರಿಗೆ ಅವಕಾಶ ನೀಡಲು ಬಿಜೆಪಿ ನಿರ್ಧರಿಸುತ್ತಿದೆ.
ಸ್ವಪಕ್ಷೀಯ ನಾಯಕರ ವಿರುದ್ಧ ಯತ್ನಾಳ್ ಆರೋಪಿಸಿದರೂ ಅದನ್ನು ಖಂಡಿಸದ, ತುಟಿ ಬಿಚ್ಚದ ಕೆಲ ಹಿರಿಯ ನಾಯಕರ ನಡೆಗೂ ಪಕ್ಷದಲ್ಲಿ ಅಪಸ್ವರ ಹೆಚ್ಚಾಗಿದೆ. ಈ ಎಲ್ಲ ವಿಘ್ನಗಳಿಗೆ ಫುಲ್ ಸ್ಟಾಪ್ ಇಡಲು ಬಿಜೆಪಿ ಮುಂದಾಗಿದೆ.