ಮೈಸೂರು: ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಕೆಲವರು ಮತ್ತೊಂದು ಬಣ ಮಾಡಿಕೊಂಡಿರುವುದು ಜಗಜ್ಜಾಹೀರಾಗಿದೆ. ಈಗ ಜೆಡಿಎಸ್ ನಲ್ಲೂ ಇದೇ ರೀತಿ ಬಣ ರಾಜಕೀಯದ ಸದ್ದು ಕೇಳಿ ಬರುತ್ತಿದೆ.
ಜೆಡಿಎಸ್ ನಲ್ಲಿ ಅಸಮಾಧಾನಿತ ನಾಯಕರ ತಂಡ ರಚನೆಗೆ ಸಿ.ಎಂ ಇಬ್ರಾಹಿಂದ ಮುಂದಾಗಿದ್ದಾರೆ ಎನ್ನಲಾಗಿದೆ. ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ನಡೆಯಿಂದ ಬೇಸರಗೊಂಡಿರುವ ಶಾಸಕರು, ನಾಯಕರನ್ನು ಒಗ್ಗೂಡಿಸಿ ತಂಡ ರಚಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಅವರು, ಜೆಡಿಎಸ್ ನ 12 ರಿಂದ 13 ಶಾಸಕರು ಪಕ್ಷದ ವಿಚಾರದಲ್ಲಿ ತುಂಬಾ ಬೇಸರದಲ್ಲಿದ್ದಾರೆ.
ಜಿ.ಟಿ.ದೇವೇಗೌಡರಂತೆ ಹಲವು ಶಾಸಕರು ನೋವು ನುಂಗಿದ್ದಾರೆ. ನಾನು ಈಗ ಅವರನ್ನೆಲ್ಲ ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇನೆ. ನಾನು ಈಗಲೂ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ. ನಮ್ಮ ಶಾಸಕರ ನೋವು ನಿವಾರಿಸುವ ಜವಾಬ್ದಾರಿ ನನ್ನದು. ಹೀಗಾಗಿ ನಾವೆಲ್ಲ ಕುಳಿತು ಜೆಡಿಎಸ್ ನಲ್ಲಿ ಇರಬೇಕಾ? ಅಥವಾ ಬೇಡವಾ? ಎಂಬ ಕುರಿತು ಚರ್ಚಿಸುತ್ತೇವೆ ಎಂದಿದ್ದಾರೆ.
ಜೆಡಿಎಸ್ ಮನೆಗೆ ಬೆಂಕಿ ಬಿದ್ದಾಗಿದೆ. ಜೆಡಿಎಸ್ ಶಾಸಕರು ಅವರವರ ಕ್ಷೇತ್ರ ಕಾಪಾಡಿಕೊಳ್ಳಬೇಕಿದೆ. ಹೀಗಾಗಿ ಒಬ್ಬೊಬ್ಬರೇ ತಮ್ಮ ಹೇಳಿಕೆ ನೀಡಲು ಆರಂಭಿಸಿದ್ದಾರೆ. ಇದರಿಂದಾದರೂ ಕುಮಾರಸ್ವಾಮಿ ಪಾಠ ಕಲಿಯಬೇಕು. ಫ್ಯಾಮಿಲಿ ಕಂಪನಿ ಮಾಡುವುದನ್ನು ಬಿಡಬೇಕು ಎಂದು ಕಿವಿ ಮಾತು ಹೇಳಿದ್ದಾರೆ.