ಬೆಂಗಳೂರು: ಸಿದ್ದರಾಮಯ್ಯ ಅವರ ಕನಸಿನ ಕೂಸು ಇಂದಿರಾ ಕ್ಯಾಂಟೀನ್ ನಲ್ಲಿ ಊಟ ಸಿಗದೆ ಬಡವರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕಾರ್ಮಿಕರು ಸೇರಿದಂತೆ ಬಡವರಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಇಂದಿರಾ ಕ್ಯಾಂಟೀನ್ ಆರಂಭಿಸಿದ್ದರು. ಕಳೆದ ಬಾರಿ ಸಿಎಂ ಆಗಿದ್ದ ವೇಳೆಯೇ ಅವರು ಈ ಯೋಜನೆ ಜಾರಿಗೆ ತಂದಿದ್ದರು. ಈಗ ಮತ್ತೆ ಅಧಿಕಾರಕ್ಕೆ ಬರುತ್ತಿದ್ದಂತೆ, ಇಂದಿರಾ ಕ್ಯಾಂಟೀನ್ ನಲ್ಲಿ ಊಟದ ಗುಣಮಟ್ಟ ಸೇರಿದಂತೆ ಕೆಲವು ಮಾರ್ಪಾಡು ಮಾಡಿದ್ದರು. ಆದರೆ, ಸಿಬ್ಬಂದಿಗೆ ಹಲವು ತಿಂಗಳುಗಳಿಂದ ಸಂಬಳ ಇಲ್ಲದೆ, ಕ್ಯಾಂಟೀನ್ ಅನಾಥವಾಗುತ್ತಿವೆ ಎನ್ನಲಾಗುತ್ತಿದೆ.
ಕಳೆದ ಆರೇಳು ತಿಂಗಳುಗಳಿಂದಲೂ ಇಂದಿರಾ ಕ್ಯಾಂಟೀನ್ ಸಿಬ್ಬಂದಿಗೆ ಸಂಬಳ ಸಿಕ್ಕಿಲ್ಲ. ಹೀಗಾಗಿ ಸಿಬ್ಬಂದಿ ಕೆಲಸಕ್ಕೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಿರ್ವಹಣೆ ಇಲ್ಲದೆ ಕ್ಯಾಂಟೀನ್ ಬಂದ್ ಆಗಿವೆ ಎಂದು ಗ್ರಾಹಕರು ಬೇಸರಿಸಿಕೊಳ್ಳುತ್ತಿದ್ದಾರೆ. ಸಿಬ್ಬಂದಿಗಳ ಕೊರತೆಯಿಂದಾಗಿ ಈ ಕ್ಯಾಂಟೀನ್ ಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎನ್ನಲಾಗುತ್ತಿದೆ.
ಸಿಲಿಕಾನ್ ಸಿಟಿಯ ಪ್ರಮುಖ ಪ್ರದೇಶಗಳಲ್ಲಿನ ಕ್ಯಾಂಟೀನ್ ಗಳು ಈ ರೀತಿ ಬಂದ್ ಆಗಿದ್ದರಿಂದಾಗಿ ಪ್ರತಿ ದಿನ ಅಲ್ಲಿಯೇ ತೆರಳಿ ಊಟ ಮಾಡುತ್ತಿದ್ದ ಕಾರ್ಮಿಕರು ಬೇಸರಿಸಿಕೊಳ್ಳುತ್ತಿದ್ದಾರೆ. ಅನಿವಾರ್ಯವಾಗಿ ಬೇರೆಡೆ ಹೆಚ್ಚು ದುಡ್ಡು ತೆತ್ತು ಹಸಿವು ನೀಗಿಸಿಕೊಳ್ಳುತ್ತಿದ್ದಾರೆ. ಈಗ ಮತ್ತೆ ಮೂರು ಕ್ಷೇತ್ರಗಳಲ್ಲಿ ಗೆದ್ದು ಆತ್ಮವಿಶ್ವಾಸದಲ್ಲಿ ಬೀಗುತ್ತಿರುವ ಸಿದ್ದರಾಮಯ್ಯ ಅವರು ಬಡವರ ಇಂದಿರಾ ಕ್ಯಾಂಟೀನ್ ನತ್ತ ನೋಡಬೇಕೆಂದು ಜನರು ಮನವಿ ಮಾಡುತ್ತಿದ್ದಾರೆ.