ಹಾಸನ: ಸಿದ್ದ ಸ್ವಾಭಿಮಾನಿ ಸಮಾವೇಶ ನಡೆಸುವ ಕುರಿತು ಇತ್ತೀಚೆಗೆ ಸುದ್ದಿಯಾಗಿತ್ತು. ಆದರೆ, ಈಗ ಸಮಾವೇಶ ಆಯೋಜಿಸುವುದು ಪಕ್ಕಾ ಎನ್ನಲಾಗುತ್ತಿದ್ದು, ಕಾರ್ಯಕ್ರಮದ ಅಂತಿಮ ಹಂತದ ರೂಪ ರೇಷೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.
ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಮುಡಾ ಹಗರಣದ ಆರೋಪ ಕೇಳಿ ಬಂದಿದೆ. ಇದನ್ನೇ ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಅವರನ್ನು ಹಣಿಯಲು ಮುಂದಾಗಿದ್ದವು. ಅಲ್ಲದೇ, ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮುಖಭಂಗ ಸೃಷ್ಟಿಸಲು ಮುಂದಾಗಿದ್ದವು. ಆದರೆ, ಜನಾದೇಶದ ಮುಂದೆ ಎಲ್ಲವೂ ತಲೆ ಕೆಳಗಾಗಿದ್ದು, ಸಿದ್ದು ಮತ್ತೊಮ್ಮೆ ಗೆದ್ದು ಬೀಗಿದ್ದಾರೆ. ಹೀಗಾಗಿ ಸಿದ್ದು ಸ್ವಾಭಿಮಾನಿ ಸಮಾವೇಶಕ್ಕೆ ಕಾಂಗ್ರೆಸ್ ಪಕ್ಷದ ಹಲವರು ಮುಂದಾಗಿದ್ದಾರೆ.
ಸಿಎಂ ಅಷ್ಟೇ ಅಲ್ಲದೇ, ವಿಪಕ್ಷಗಳು ಕಾಂಗ್ರೆಸ್ ವಿರುದ್ಧ ವಾಲ್ಮೀಕಿ ನಿಗಮ ಹಗರಣ, ಮುಡಾ ಹಗರಣ, ವಕ್ಫ್ ವಿವಾದ, ರೇಷನ್ ಕಾರ್ಡ್ ರದ್ದು, ಅಬಕಾರಿ ಲಂಚ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದವು. ಆದರೆ, ಜನ ಮಾತ್ರ ಇವುಗಳಿಗೆ ತಲೆ ಕೆಡಿಸಿಕೊಂಡಿಲ್ಲ ಎನ್ನಲಾಗಿದೆ. ಹೀಗಾಗಿಯೇ ಈ ಸಮಾವೇಶಕ್ಕೆ ಮತ್ತಷ್ಟು ರೋಚಕತೆ ಸಿಕ್ಕಂತಾಗಿದೆ.
ಈಗ ಚುನಾವಣೆ ಗೆದ್ದ ಖುಷಿಯಲ್ಲಿರುವ ಕಾಂಗ್ರೆಸ್ ಪಡೆ, ಸಿದ್ದರಾಮಯ್ಯ ಅಭಿಮಾನಿಗಳ ಹೆಸರಿನಲ್ಲಿ ಅವರ ಬೆಂಬಲಿಗ ಸಚಿವರು ಹಾಸನದಲ್ಲಿ ಬೃಹತ್ ಸಮಾವೇಶ ನಡೆಸಲು ಸಜ್ಜಾಗಿದ್ದಾರೆ. ಡಿಸೆಂಬರ್ 5 ರಂದು ಸರ್ಕಾರ ಹೊರತುಪಡಿಸಿ, ಅಭಿಮಾನಿಗಳಿಂದಲೇ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಸಿದ್ದರಾಮಯ್ಯ ಆಪ್ತ ವಲಯದ ನಾಲ್ವರು ಸಚಿವರು, ಅವರ ಪುತ್ರ ಯತೀಂದ್ರ ಸೇರಿ ಹಲವು ಕಾಂಗ್ರೆಸ್ ನಾಯಕರು ಜಂಟಿಯಾಗಿ ಸಭೆ ನಡೆಸಿದ್ದು, ಸಿದ್ದು ಸ್ವಾಭಿಮಾನಿ ಸಮಾವೇಶ ನಡೆಸುವುದಾಗಿ ಘೋಷಿಸಿದ್ದಾರೆ.
ಹಾಸನದದಲ್ಲಿ ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಮೈಸೂರು, ಚಿಕ್ಕಮಗಳೂರು ಜಿಲ್ಲೆಯ ಜನರನ್ನು ಸೇರಿಸಿ ‘ಸಿದ್ದು ಸ್ವಾಭಿಮಾನಿ ಸಮಾವೇಶ’ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ. ಹೀಗಾಗಿ ಹಾಸನದಲ್ಲಿ ಇಂದು ಸಚಿವರಾದ ಎಚ್ಸಿ ಮಹದೇವಪ್ಪ, ಕೆಎನ್ ರಾಜಣ್ಣ, ಪಿರಿಯಾಪಟ್ಟಣ ವೆಂಕಟೇಶ, ಬೋಸರಾಜು, ಶಾಸಕರಾದ ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಸಿದ್ದು ಪುತ್ರ ಯತೀಂದ್ರ ಸಭೆ ನಡೆಸಿ ಸಮಾವೇಶದ ಬಗ್ಗೆ ಘೋಷಿಸಿದ್ದಾರೆ.
ಇದು ಸರ್ಕಾರದ ಕಾರ್ಯಕ್ರಮ ಅಲ್ಲ, ಪಕ್ಷದ ಕಾರ್ಯಕ್ರಮವೂ ಅಲ್ಲ ಎಂದು ಸಚಿವ ಮಹದೇವಪ್ಪ ಹೇಳಿದ್ದಾರೆ. ಸಿದ್ದರಾಮಯ್ಯ ಅವರ ಅಭಿಮಾನಿಗಳು ಬಂದು ಕೇಳಿಕೊಂಡಿದ್ದಾರೆ. ಹೀಗಾಗಿ ನಾವು ಸಹಾಯ ಮಾಡುತ್ತಿದ್ದೇವೆ ಎಂದಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಸಾಲು ಸಾಲು ಆರೋಪ ಮಾಡಿ ಜೆಡಿಎಸ್, ಬಿಜೆಪಿ ನಡೆಸಿದ ಹೋರಾಟಕ್ಕೆ ತಮ್ಮ ಬೆಂಬಲಿಗರ ಮೂಲಕ ಸೆಡ್ಡು ಹೊಡೆಯಲು ಸಿದ್ದರಾಮಯ್ಯ ಈ ಮೂಲಕ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.