ಹಾಸನ: ಸರ್ವೇಗೆ ಬಂದವರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಬಳ್ಳೂರು ಗ್ರಾಮದಲ್ಲಿ ನಡೆದಿದೆ. ಜಮೀನಿನ ಪಕ್ಕದ ಕೆರೆಯ ಮಣ್ಣನ್ನು ಅಕ್ರಮವಾಗಿ ತೆಗೆಯುತ್ತಿದ್ದ ಸಂದರ್ಭದಲ್ಲಿ ಬಂದಿದ್ದ ಅಧಿಕಾರಿಗಳ ಹತ್ಯೆಗೆ ಯತ್ನಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ಹಾಗೂ ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ಕೆ.ಪಿ ಯೋಗಾನಂದ ಮತ್ತು ಆತನ ತಂದೆ ಕೆ.ಎಸ್ ಪದ್ಮಾಕ್ಷೇಗೌಡ ಬಂಧಿತ ಆರೋಪಿಗಳು. ತಂದೆ ಹಾಗೂ ಮಗ ಕೆರೆಯಲ್ಲಿ ಅಕ್ರವಾಗಿ ಮಣ್ಣು ತೆಗೆಯುತ್ತಿದ್ದರು ಎನ್ನುವ ಆರೋಪ ಕೇಳಿ ಬಂದಿದೆ. ಈ ಆರೋಪಿಗಳ ವಿರುದ್ಧ ಗ್ರಾಮಸ್ಥರು, ತಹಸೀಲ್ದಾರ್ ಗೆ ದೂರು ನೀಡಿದ್ದರು. ಹೀಗಾಗಿ ಬೇಲೂರು ತಹಶೀಲ್ದಾರ್ ಮಮತ ಅವರು ಕೆರೆಯ ಸರ್ವೆಗೆ ಆದೇಶಿಸಿದ್ದರು. ತಹಶೀಲ್ದಾರ್ ಆದೇಶದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸರ್ವೇಗೆ ಆಗಮಿಸಿದ್ದರು.
ಆಗ ಆರೋಪಿಗಳು ಟೆಂಪೋ ಹತ್ತಿಸಿ ಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಅಧಿಕಾರಿಗಳು ಪ್ರಾಣಾಪಾಯದಿಂದ ಓಡಿ ಹೋಗಿದ್ದಾರೆ. ನಂತರ ಬಂದೂಕು ತೋರಿಸಿ ಸರ್ವೇ ಮಾಡಲು ಬಂದಿದ್ದ ಅಧಿಕಾರಿಗಳನ್ನು ಹೆದರಿಸಿದ್ದಾರೆ. ಸದ್ಯ ಈ ಕುರಿತಂತೆ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.