ಬಳ್ಳಾರಿ: ರಾಜ್ಯದಲ್ಲಿ ನಡೆದ ಉಪ ಚುನಾವಣೆಯ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಈ ಮಧ್ಯೆ ಪರಾಜಿತ ಅಭ್ಯರ್ಥಿಗಳು ಹಣ ಬಲದಿಂದ ಸೋತಿದ್ದೇವೆ ಎಂದು ಆರೋಪ ಮಾಡುತ್ತಿದ್ದು, ಈಗ ಸಂಡೂರು ವಿಧಾಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಕೂಡ ಆರೋಪಿಸಿದ್ದಾರೆ.
ಸಚಿವ ಶಿವರಾಜ ತಂಗಡಗಿ ಮತದಾರರಿಗೆ ಸಾಕಷ್ಟು ಹಣ ಹಂಚಿದ್ದಾರೆ. ಕಾಂಗ್ರೆಸ್ ಹಣ ಹಂಚಿದ ಪ್ರದೇಶದಲ್ಲಿ ನಮಗೆ ಭಾರೀ ಹಿನ್ನಡೆಯಾಗಿದೆ ಎಂದು ಆರೋಪಿಸಿದ್ದಾರೆ.
ಆದರೆ ಏನೇ ಆದರೂ ಸೋಲಿನ ಹೊಣೆ ನಾನೇ ಹೊರುವೆ. ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರು ಪ್ರಾಮಾಣಿಕವಾಗಿ ಹಗಲಿರುಳು ದುಡಿದಿದ್ದಾರೆ. ಆದರೆ, ಇದು ಧರ್ಮ, ಅಧರ್ಮ ಚುನಾವಣೆಯಾಗಿದೆ. ಈ ಸೋಲನ್ನು ನಾನು ಸವಾಲಾಗಿ ಸ್ವೀಕರಿಸುತ್ತೇನೆ. ಮುಂದಿನ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಬಿಜೆಪಿಯ ಗೆಲುವು ಖಚಿತ. ಈಗಿನಿಂದಲೇ ಮುಂದಿನ ಚುನಾವಣೆಯ ತಯಾರಿ ನಡೆಸುತ್ತೇವೆ ಎಂದಿದ್ದಾರೆ.