ಸಂಡೂರು: ಸಂಡೂರು ಉಪಚುನಾವಣೆಯ ಫಲಿತಾಂಶ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದ್ದು, ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಗೆಲ್ಲುವುದು ಪಕ್ಕಾ ಎನ್ನಲಾಗುತ್ತಿದೆ. ಈ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರು ದೇವರ ದರ್ಶನ ಮಾಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ವಿರುದ್ಧ ಸುಮಾರು 10 ಸಾವಿರ ಮತಗಳ ಅಂತರದ ಮುನ್ನಡೆ ಸಾಧಿಸಿದ್ದಾರೆ. ಹೀಗಾಗಿ ಅನ್ನಪೂರ್ಣ ಅವರ ಗೆಲುವು ಬಹುತೇಕ ಖಚಿತ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅನ್ನಪೂರ್ಣ ತುಕಾರಾಂ ಅವರು ಪತಿ ಈ. ತುಕಾರಾಂ ಅವರೊಂದಿಗೆ ಕನಕ ದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ಆಶೀರ್ವಾದ ಪಡೆದರು. ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ದಂಪತಿ ಚುನಾವಣಾ ಗೆಲುವಿಗಾಗಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಬೆಂಬಲಿಗರು ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅನ್ನಪೂರ್ಣ, ಕನಕ ದುರ್ಗಮ್ಮ ತಾಯಿಯ ಆಶೀರ್ವಾದ ಪಡೆದಿದ್ದೇನೆ. ಗೆಲುವು ನಮ್ಮದೇ ಆಗಲಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಕಾಂಗ್ರೆಸ್ನ ಭದ್ರಕೋಟೆಯಾಗಿರುವ ಸಂಡೂರ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ ಎನ್ನುವ ವಿಶ್ವಾಸ ಇದೆ ದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ.