ಬೆಂಗಳೂರು: ಬಿಪಿಎಲ್ ಕಾರ್ಡ್ ರದ್ದುಗೊಳ್ಳುತ್ತಿರುವ ವಿಚಾರ ರಾಜ್ಯದಲ್ಲಿ ದೊಡ್ಡ ಸದ್ದು ಮಾಡುತ್ತಿದ್ದು, ಆರೋಪ- ಪ್ರತ್ಯಾರೋಪಗಳು ಜೋರಾಗಿದ್ದವು. ಇದೇ ವಿಷಯವನ್ನು ಮುಂದಿಟ್ಟುಕೊಂಡು ಸರ್ಕಾರ ಹಣೆಯುವ ಕಾರ್ಯಕ್ಕೆ ವಿಪಕ್ಷಗಳು ಮುಂದಾಗಿದ್ದವು. ಹೀಗಾಗಿ ಸರ್ಕಾರ ಎಚ್ಚೆತ್ತುಕೊಂಡಿದ್ದು, ಸಿಎಂ ರದ್ದು ಮಾಡದಂತೆ ತಿಳಿಸಿದ್ದರು. ಈಗ ಆಹಾರ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.
ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಆಯುಕ್ತರು ಆದೇಶವನ್ನು ಹೊರಡಿಸಿದ್ದಾರೆ. ಆದಾಯ ತೆರಿಗೆ ಪಾವತಿದಾರರು ಹಾಗೂ ಸರ್ಕಾರಿ ನೌಕರರನ್ನು ಹೊರತುಪಡಿಸಿ ಬೇರೆ ಯಾರ ಬಿಪಿಎಲ್ ಕಾರ್ಡ್ ಗಳು ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತನೆ ಆಗಿದ್ದರೆ, ಅವುಗಳನ್ನು 1 ವಾರದಲ್ಲಿ ಸರಿಪಡಿಸಲಾಗುತ್ತದೆ. ಹಳೆಯ ಕಾರ್ಡ್ ಹಾಗೂ ನಂಬರ್ ಬಳಸಿ ಹಿಂದಿನಂತೆಯೇ ಆಹಾರ ಧಾನ್ಯ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಸರ್ಕಾರಿ ನೌಕರರು ಆದಾಯ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ ಉಳಿದಂತೆ ಯಾರೊಬ್ಬರ ಪಡಿತರ ಚೀಟಿ ರದ್ದು ಮಾಡದಂತೆ ಸೂಚಿಸಲಾಗಿದೆ.
ಆದ್ಯತಾ ಪಡಿತರ ಚೀಟಿಯನ್ನು ನೀಡಲು ಸರ್ಕಾರದಿಂದ ನಿಗದಿಪಡಿಸಿರುವ ಮಾನದಂಡಗಳನ್ನು ಪರಿಶೀಲಿಸಿ ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಮಾತ್ರ ಕ್ರಮ ವಹಿಸಬೇಕೆಂದು ಕಟ್ಟು ನಿಟ್ಟಾಗಿ ಸೂಚಿಸಲಾಗಿದೆ. ಆದಾಯ ತೆರಿಗೆ ಪಾವತಿದಾರರು ಹಾಗೂ ಸರ್ಕಾರಿ ನೌಕರರನ್ನು ಹೊರತುಪಡಿಸಿ, ಉಳಿದಂತೆ ತೆಗೆದುಕೊಂಡಿರುವ ಕ್ರಮವನ್ನು ಮರು ಸ್ಥಾಪಿಸಲು ಕೂಡಲೇ ಕ್ರಮ ವಹಿಸಲು ಸರ್ಕಾರದ ಪತ್ರದಲ್ಲಿ ನಿರ್ದೇಶಿಸಲಾಗಿದೆ.