ಬೆಂಗಳೂರು: ಕೆಆರ್‌ಎಸ್ ಜಲಾಶಯದ ಸುತ್ತ ಗಣಿಗಾರಿಕೆ ನಡೆಸುತ್ತಿರುವ ಘಟಕಗಳನ್ನು ಪರಿಶೀಲಿಸಿ ಸಮಗ್ರ ವರದಿ ಸಲ್ಲಿಸಲು ಹೈಕೋರ್ಟ್, ಜಲಾಶಯ ಸುರಕ್ಷತಾ ಸಮಿತಿಗೆ ಸೂಚಿಸಿದೆ.
ಇದಕ್ಕಾಗಿ 6 ತಿಂಗಳ ಗಡುವು ನೀಡಲಾಗಿದೆ. ಕಲ್ಲು ಗಣಿಗಾರಿಕೆ ಕುರಿತಂತೆ ಸಿಜಿ ಕುಮಾರ್ ಸಲ್ಲಿಸಿರುವ ಮೂಲ ಅರ್ಜಿಯಲ್ಲಿ ಸಲ್ಲಿಕೆಯಾಗಿರುವ ಹಲವು ಮಧ್ಯಂತರ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಎನ್ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆವಿ ಅರವಿಂದ್ ಅವರಿದ್ದ ಪೀಠ, ವರದಿ ಸಲ್ಲಿಸುವಂತೆ 6 ತಿಂಗಳ ಗಡುವು ನೀಡಿದೆ.
ಜಲಾಶಯದ ಸುತ್ತ 20 ಕಿಮೀ ವ್ಯಾಪ್ತಿಯಲ್ಲಿ ಕಲ್ಲುಕ್ವಾರಿ ಜತೆಗೆ ಸ್ಫೋಟಕ ಚಟುವಟಿಕೆ ನಡೆಸುತ್ತಿರುವ ಘಟಕಗಳನ್ನು ಪರಿಶೀಲಿಸಿ ವರದಿ ಸಲ್ಲಿಸಬೇಕೆಂದು 2024ರ ಮಾರ್ಚ್ 5ರಂದು ಸರಕಾರಕ್ಕೆ ಆದೇಶ ನೀಡಿತ್ತು. ಆದರೆ, ಆ ಸಮಯಾವಕಾಶ ಸಾಕಾಗುತ್ತಿಲ್ಲ. ಮತ್ತೆ ಸಮಯ ನೀಡಬೇಕೆಂದು ಅಡ್ವೊಕೇಟ್ ಜನರಲ್ ಮನವಿ ಮಾಡಿದ್ದರು. ಈಗ 6 ತಿಂಗಳ ಅವಕಾಶ ನೀಡಲಾಗಿದೆ.