ನವದೆಹಲಿ: ಮತದಾರರಿಗೆ 5 ಕೋಟಿ ರೂ. ಹಂಚಿದ ಆರೋಪ ಎದುರಿಸುತ್ತಿರುವ ಬಿಜೆಪಿ ನಾಯಕ ವಿನೋದ್ ತಾವ್ಡೆ (Vinod Tawde) ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ಕೈ ನಾಯಕ ಸುಪ್ರಿಯಾ ಶ್ರೀನಾಥ್ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರುಗಳಿಗೆ ಲೀಗಲ್ ನೋಟಿಸ್ ನೀಡಿದ್ದಾರೆ.
ಸುಳ್ಳು ಮತ್ತು ಆಧಾರ ರಹಿತ ಆರೋಪ ಮಾಡಿದ್ದಕ್ಕಾಗಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹಾಗೂ ರಾಹುಲ್ ಗಾಂಧಿ ಅವರು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ, 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹಾಕುವುದಾಗಿ ನೋಟಿಸ್ ನಲ್ಲಿ ಎಚ್ಚರಿಸಿದ್ದಾರೆ.
ಮುಂಬೈನಿಂದ 60 ಕಿ.ಮೀ ದೂರದಲ್ಲಿರುವ ಪಾಲ್ಘರ್ ಜಿಲ್ಲೆಯ ವಿರಾರ್‌ನಲ್ಲಿರುವ ಹೋಟೆಲ್‌ನಲ್ಲಿ ವಿನೋದ್ ತಾವ್ಡೆ ಅವರು ಮತದಾರರನ್ನು ಓಲೈಸಲು 5 ಕೋಟಿ ರೂ. ಹಂಚಿದ್ದಾರೆ ಎಂದು ಪ್ರಾದೇಶಿಕ ಪಕ್ಷದ ಬಹುಜನ ವಿಕಾಸ್ ಅಘಾಡಿ (BVA) ನಾಯಕ ಹಿತೇಂದ್ರ ಠಾಕೂರ್ ಆರೋಪಿಸಿದ್ದರು. ಇದು ಆಧಾರ ರಹಿತ ಎಂದು ಹೇಳಿದ್ದಾರೆ.