ಮಡಿಕೇರಿ: ಭಾರತ ಜನಸಂಖ್ಯೆಯಲ್ಲಿ ಜಗತ್ತಿಗೆ ಮೊದಲ ಸ್ಥಾನದಲ್ಲಿದೆ. ಹಿರಿಯರ ಸಂಖ್ಯೆ ಹೆಚ್ಚಾಗುತ್ತಿದ್ದು, ಯುವಕರ ಸಂಖ್ಯೆ ಕ್ಷೀಣಿಸುತ್ತಿದೆ. ಹೀಗಾಗಿ ಹಲವು ರಾಜ್ಯಗಳಲ್ಲಿ ಈಗಾಗಲೇ ಹೆಚ್ಚು ಮಕ್ಕಳನ್ನು ಹೆರುವಂತೆ ಸೂಚಿಸಲಾಗುತ್ತಿದೆ. ಈ ಮಧ್ಯೆ ರಾಜ್ಯದ ಕೊಡವರ ಸಂಖ್ಯೆ ಹೆಚ್ಚಿಸುವುದಕ್ಕಾಗಿ ಕೂಡ ಬಹುಮಾನ ಘೋಷಣೆ ಮಾಡಲಾಗಿದೆ.
ಹೆಚ್ಚು ಹೆಚ್ಚು ಮಕ್ಕಳನ್ನು ಹೆರುವ ಕೊಡವ ಪೋಷಕರಿಗೆ 25 ಸಾವಿರ ರೂ. ನಿಂದ 1 ಲಕ್ಷ ರೂ. ವರೆಗೆ ಬಹುಮಾನ ನೀಡುವ ಆಫರ್ ಘೋಷಿಸಲಾಗಿದೆ. ರಾಜ್ಯದ ಕೊಡಗು ಜಿಲ್ಲೆಯಲ್ಲಿ ಈ ಸಮುದಾಯದ ಜನರಿದ್ದಾರೆ. ಈ ಸಮುದಾಯ ರಾಷ್ಟ್ರ ಮಟ್ಟದಲ್ಲಿ ಸಾಕಷ್ಟು ಹೆಸರು ಗಳಿಸಿದೆ. ಅಲ್ಲದೇ, ತನ್ನದೆಯಾದ ಸಂಸ್ಕೃತಿ ಹೊಂದಿದೆ. ಈಗ ಈ ಪರಂಪರೆಯನ್ನು ಮತ್ತಷ್ಟು ಬೆಳೆಸಲು ಈ ಸಮಾಜ ಮುಂದಾಗಿದೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಟಿ. ಶೆಟ್ಟಿಗೇರಿ ಕೊಡವ ಸಮಾಜ (T Shettigeri Kodava Samaja)ಈಗ ಆಫರ್ ಘೋಷಿಸಿದೆ. ಮೂರು ಮಕ್ಕಳಿಗೆ ಜನ್ಮ ನೀಡುವ ಕೊಡವ ಪೋಷಕರಿಗೆ 50 ಸಾವಿರ ರೂ., 4 ಮಕ್ಕಳಿಗೆ ಜನ್ಮ ನೀಡುವ ಪೋಷಕರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದೆ. ಈ ಹಣವನ್ನು ಮಗುವಿನ ಹೆಸರಲ್ಲಿ ಬ್ಯಾಂಕ್ನಲ್ಲಿ ಠೇವಣಿ ಇಟ್ಟು 18 ವರ್ಷ ತುಂಬಿದ ನಂತರ ನೀಡುವುದಾಗಿ ಪ್ರಕಟಣೆ ತಿಳಿಸಿದೆ.