ಬೆಂಗಳೂರು: ವಕ್ಫ್ ನೋಟಿಸ್ ಹಿಂಪಡೆಯಲು ಆದೇಶ ನೀಡಿದಂತೆ, ಬಿಪಿಎಲ್ ಕಾರ್ಡ್ ರದ್ದತಿ ವಿರುದ್ಧ ಆದೇಶ ನೀಡಬೇಕು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
ಒಂದು ವೇಳೆ ಸರ್ಕಾರ ಕಾರ್ಡ್ ಗಳನ್ನು ಮರಳಿ ನೀಡದಿದ್ದರೆ, ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ರಾಜ್ಯಾದ್ಯಂತ ಎಲ್ಲಾ ತಾಲೂಕು ಕಚೇರಿಗಳಿಗೆ ಬೀಗ ಹಾಕಿ ಉಗ್ರ ಹೋರಾಟ ಮಾಡುವುದಾಗಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ಎಚ್ಚರಿಸಿದ್ದಾರೆ.
ಮಹಾಲಕ್ಷ್ಮೀ ವಿಧಾನಸಭಾ ಕ್ಷೇತ್ರದ ನಂಜಪ್ಪ ಬಡಾವಣೆ ಹಾಗೂ ಜೈ ಮಾರುತಿನಗರ ಬಡಾವಣೆಗಳಲ್ಲಿ ಪಡಿತರ ಚೀಟಿ ರದ್ದಾದ ಮನೆಗಳಿಗೆ ಶಾಸಕ ಡಾ. ಅಶ್ವಥ್ ನಾರಾಯಣ್, ಕೆ. ಗೋಪಾಲಯ್ಯ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನೆಡೆಸಿ ಮಾತನಾಡಿದರು.
50 ವರ್ಷ ಆಡಳಿತ ಮಾಡಿದ್ದೀರಿ. ಬೋಗಸ್ ಕಾರ್ಡ್ ಗಳನ್ನು ಯಾರು ಕೊಟ್ಟಿದ್ದಾರೆ ಎಂಬುವುದು ನಿಮಗೆ ಗೊತ್ತಿಲ್ಲವೇ? ಮೊದಲು ಬೋಗಸ್ ಕಾರ್ಡ್ ಕೊಟ್ಟ ಅಧಿಕಾರಿಗಳ ವಿರುದ್ಧ ತಾಕತ್ತಿದ್ದರೆ ಕ್ರಮ ತೆಗೆದುಕೊಳ್ಳಿ ಎಂದು ಕಿಡಿಕಾರಿದರು. ವಕ್ಫ್ ಬೋರ್ಡ್ ಗೆ ಆದೇಶ ಕೊಟ್ಟ ರೀತಿಯಲ್ಲೇ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಿರುವ ಬಗ್ಗೆಯೂ ಆದೇಶ ಹೊರಡಿಸಬೇಕು. ಇಲ್ಲವಾದರೆ, ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದರೆ ವಾಪಸ್ ಪಡೆಯಿರಿ, ಆ ಕಾರ್ಡ್ ಗಳನ್ನು ಹಿಂಪಡೆಯಲು ದಮ್ ನಿಮಗೆ ಇಲ್ಲವೇ? ನಿಮ್ಮ ಬಳಿ ಇರುವ ದಾಖಲೆ ಹುಡುಕಿ ಬಿಪಿಎಲ್ ಕಿತ್ತು ಹಾಕಿ. ಅವರು ಹೋರಾಟ ಮಾಡುತ್ತಾರೆ ಎಂದು ಬಡವರ ಮೇಲೆ ದರ್ಪ ಯಾಕೆ ತೋರಿಸುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಾಜಿ ಶಾಸಕ ನರೇಂದ್ರಬಾಬು ಸೇರಿದಂತೆ ಹಲವರು ಇದ್ದರು.