ಬೆಂಗಳೂರು: ರಾಜ್ಯ ಸರ್ಕಾರವು ಅನರ್ಹರ ಕಾರ್ಡ್ ಗಳನ್ನು ರದ್ದು ಮಾಡಲು ಮುಂದಾಗಿದ್ದು, ಸದ್ಯ ರಾಜ್ಯದಲ್ಲಿ 22 ಲಕ್ಷ ಅನರ್ಹ ಕಾರ್ಡ್ ಗಳಿವೆ ಎನ್ನಲಾಗುತ್ತಿದೆ. ಈ ಕುರಿತು ಆಹಾರ ಇಲಾಖೆಗೆ ಇ ಗವರ್ನೆನ್ಸ್ ಇಲಾಖೆ ಮಾಹಿತಿ ನೀಡಿದೆ. ಈ ಮಾಹಿತಿ ಇಟ್ಟುಕೊಂಡು 22 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ಗಳ ರದ್ದು ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಕಲಬುರಗಿ ಜಿಲ್ಲೆಯಲ್ಲೇ ಅತಿ ಹೆಚ್ಚು ಅನರ್ಹರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಕಲಬುರಗಿಯಲ್ಲಿ 78,058 ಅನರ್ಹರು ಕಾರ್ಡ್ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 65,563 ಅನರ್ಹರು ಕಾರ್ಡ್ ಪಡೆದಿದ್ದಾರೆ ಎನ್ನಲಾಗಿದೆ. ಆದರೆ, ಸಿಎಂ ಹಾಗೂ ಆಹಾರ ಇಲಾಖೆ ಸಚಿವರು ಯಾವುದೇ ಕಾರಣಕ್ಕೂ ಬಡವರಿಗೆ ಮೋಸ ಆಗುವುದಿಲ್ಲ. ಅನರ್ಹರ ಕಾರ್ಡ್ ಮಾತ್ರ ರದ್ದು ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಈ ಮಧ್ಯೆ ಇದೇ ವಿಷಯವನ್ನು ಅಸ್ತ್ರವಾಗಿ ಇಟ್ಟುಕೊಂಡಿರುವ ಬಿಜೆಪಿಯು ಕಾಂಗ್ರೆಸ್ ಹಣಿಯಲು ಮುಂದಾಗಿದೆ. ಬಿಪಿಎಲ್ ಕಾರ್ಡ್ ಪರಿಷ್ಕರಣೆಯನ್ನೇ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ, ಸತ್ಯಶೋಧನೆ ನಡೆಸುತ್ತಿದೆ. ಬಿಪಿಎಲ್ ಕಾರ್ಡ್ ರದ್ದಾದವರ ಮನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಭೇಟಿ ನೀಡಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಜೈ ಮಾರುತಿ ನಗರದಲ್ಲಿ ಬಿಪಿಎಲ್ ಕಾರ್ಡ್ ರದ್ದಾದವರ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ್ದಾರೆ. ಈ ವೇಳೆ ಸರ್ಕಾರದ ವಿರುದ್ಧ ಗುಡುಗಿದ್ದು, ಸರ್ಕಾರಕ್ಕೆ ಹೊರೆಯಾಗುತ್ತದೆ ಎಂಬ ಕಾರಣಕ್ಕೆ ಈ ರೀತಿ ಬಡವರ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.