ನವದೆಹಲಿ: ಮಹಾರಾಷ್ಟ್ರ ವಿಧಾನಸಭೆಯ ( Maharashtra Assembly Polls ) 288 ಕ್ಷೇತ್ರಗಳಿಗೆ ಇಂದು ಮತದಾನ ನಡೆದಿದ್ದು, ಸೆಲೆಬ್ರಿಟಿಗಳು ಕೂಡ ಮತದಾನದ ಹಬ್ಬದಲ್ಲಿ ಖುಷಿಯಿಂದಲೇ ಭಾಗವಹಿಸಿದ್ದಾರೆ.
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ನಟ ಅಕ್ಷಯ್ ಕುಮಾರ್ ಸೇರಿದಂತೆ ಹಲವರು ಮತದಾನ ಮಡಿದ್ದಾರೆ. ಮುಂಬೈನ ಮತಗಟ್ಟೆಯಲ್ಲಿ ಸಚಿನ್ ತೆಂಡೂಲ್ಕರ್ ತಮ್ಮ ಪತ್ನಿ ಅಂಜಲಿ ಮತ್ತು ಮಗಳು ಸಾರಾ ಅವರೊಂದಿಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಈ ವೇಳೆ ಮಾತನಾಡಿರುವ ಸಚಿನ್, ಇತ್ತೀಚೆಗೆ ನಾನು ಭಾರತೀಯ ಚುನಾವಣಾ ಆಯೋಗದ ಐಕಾನ್ ಆಗಿದ್ದೇನೆ. ಎಲ್ಲರು ಮತದಾನ ಮಾಡಿ ಎಂದು ನಾನು ಸಂದೇಶ ನೀಡುತ್ತಿದ್ದೇನೆ. ಇದು ದೇಶದ ಪ್ರತಿಯೊಬ್ಬರ ಜವಾಬ್ದಾರಿ ಕೂಡ. ಹೀಗಾಗಿ ಎಲ್ಲರೂ ಮತ ಚಲಾಯಿಸುವಂತೆ ನಾನು ವಿನಂತಿಸುತ್ತೇನೆ ಎಂದಿದ್ದಾರೆ.
ನಟ ಅಕ್ಷಯ್ ಕುಮಾರ್ ಕೂಡ ತಮ್ಮ ಹಕ್ಕು ಚಲಾಯಿಸಿದರು. ನಟಿ ಟೀನಾ ದತ್ತಾ, ನಟಿ ಹಾಗೂ ರಾಜಕಾರಣಿ ಊರ್ಮಿಳಾ ಮಾತೋಮಂಡ್ಕರ್, ನಟ ರಾಜಕುಮಾರ್ ರಾವ್, ತಾರಾ ದಂಪತಿ ರಿತೇಶ್ ದೇಶ್‌ಮುಖ್, ಜೆನಿಲಿಯಾ ಡಿಸೋಜಾ, ನಿರ್ದೇಶಕ ಕಬೀರ್ ಖಾನ್ ಮತ್ತು ಜೋಯಾ ಅಖ್ತರ್, ನಟರಾದ ಅಲಿ ಫಜಲ್ ಮತ್ತು ಜಾನ್ ಅಬ್ರಹಾಂ, ನಿರ್ಮಾಪಕ, ನಟ ಫರ್ಹಾನ್ ಅಖ್ತರ್ ಕೂಡ ಮತದಾನ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. 288 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಇಂದು ಮತಪಟ್ಟಿಗೆಯಲ್ಲಿ ಭದ್ರವಾಗಲಿದೆ. ಚುನಾವಣೆಯಲ್ಲಿ 2,086 ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ಒಟ್ಟು 4,136 ಅಭ್ಯರ್ಥಿಗಳ ಭವಿಷ್ಯವನ್ನು ಇಂದು ಮತದಾರ ಬರೆಯುತ್ತಿದ್ದಾರೆ. ಇದರೊಂದಿಗ ಜಾರ್ಖಂಡ್ ನಲ್ಲೂ ಇಂದು ಕೊನಯ ಹಂತದ ಮತದಾನ ನಡೆಯುತ್ತಿದ್ದು, 38 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ.