ಬೆಂಗಳೂರು: ನಗರದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಶೋ ರೂಮ್ ಗೆ ಬೆಂಕಿ ತಗುಲಿದ್ದು, ಇಡೀ ಕಟ್ಟಡವೇ ಬೆಂಕಿಗೆ ಆಹುತಿಯಾಗಿದೆ.
ರಾಜಾಜಿನಗರದ ಡಾ.ರಾಜಕುಮಾರ್ ರಸ್ತೆಯಲ್ಲಿನ ಶೋ ರೂಮ್ ನಲ್ಲಿ ಈ ಘಟನೆ ನಡೆದಿದೆ. ಅಲ್ಲದೇ, ಘಟನೆಯಲ್ಲಿ ಸಿಬ್ಬಂದಿಯೊಬ್ಬರು ಬಲಿಯಾಗಿದ್ದಾರೆ. ಬೆಂಕಿಯು ಆಕಸ್ಮಿಕವಾಗಿ ತಗುಲಿದೆ ಎನ್ನಲಾಗಿದೆ. ನೋಡ ನೋಡುತ್ತಿದ್ದಂತೆ ಬೆಂಕಿ ಹೆಚ್ಚಾಗಿ, ಇಡೀ ಕಟ್ಟಡಕ್ಕೆ ಆವರಿಸಿದೆ ಎನ್ನಲಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ರಾಜಾಜಿನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳದಲ್ಲಿ ಬೆಂಕಿ ನಂದಿಸಲು ಹರಸಾಹ ಪಟ್ಟಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಬರುವ ಹೊತ್ತಿಗೆ ಇದೇ ಶೋ ರೋಮ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರಿಯಾ ಎಂಬ ಹೆಣ್ಣುಮಗಳು ಬೆಂಕಿಗೆ ಆಹುತಿಯಾಗಿದ್ದಾಳೆ. ಬೆಂಕಿ ನಂದಿಸಿ ಶವ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗಿದೆ.
ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದಾಗಿ ಅಕ್ಕಪಕ್ಕದ ಅಂಗಡಿಗಳಿಗೆ, ಇತರರಿಗೆ ಘಟನೆಯಿಂದ ಹಾನಿ ಆಗುವುದು ತಪ್ಪಿದೆ. ಘಟನೆಯಲ್ಲಿ ಅಂದಾಜು 30ಕ್ಕೂ ಹೆಚ್ಚು ಇವಿ ಸ್ಕೂಟರ್, ಬ್ಯಾಟರಿ, ಇನ್ನಿತರ ಪರಿಕರಗಳು ಸುಟ್ಟು ಕರಕಲಾಗಿವೆ ಎನ್ನಲಾಗಿದೆ.