ಬೆಂಗಳೂರು: ಯಾವುದೇ ಕಾರಣಕ್ಕೂ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡುವುದಿಲ್ಲ. ಯಾರೂ ಅನಗತ್ಯ ಆತಂಕ ಪಡುವಂತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಇಂದಿರಾಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನರ್ಹರ ಕಾರ್ಡ್ ಗಳನ್ನು ಮಾತ್ರ ಎಪಿಲ್ ಗೆ ವರ್ಗಾಯಿಸಲಾಗುತ್ತಿದೆ. ಯಾರೂ ಅನಗತ್ಯ ಆತಂಕ ಪಡುವುದು ಬೇಡ. ಏಕೆಂದರೆ, ಈ ಯೋಜನೆಯನ್ನು ಜಾರಿಗೆ ತಂದಿದ್ದೇ ನಾವು. ನಾವು ನೀಡುತ್ತಿದ್ದ ಏಳು ಕೆಜಿ ಅಕ್ಕಿಯನ್ನು ಬಿಜೆಪಿ 5 ಕೆಜಿಗೆ ಇಳಿಸಿದೆ. ಬಡವರ ಪರವಾಗಿ ಇರುವವರು ನಾವು. ಗ್ಯಾರಂಟಿ ಯೋಜನೆ ಜಾರಿಗೆ ತಂದವರು ನಾವು. ಇಂದಿರಾ ಕ್ಯಾಂಟೀನ್ ಮಾಡಿದ್ದು ನಾವು. ಬಿಜೆಪಿ ಅಧಿಕಾರ ಇಂತಹ ಯಾವ ಯೋಜನೆಗಳೂ ಇಲ್ಲ ಎಂದು ಹೇಳಿದ್ದಾರೆ.
ಗೃಹ ಲಕ್ಷ್ಮಿ ಯೋಜನೆ ಅಡಿಯಲ್ಲಿ 1 ಕೋಟಿ 22 ಲಕ್ಷ ಕುಟುಂಬದ ಮನೆ ಯಜಮಾನಿಗೆ 2000 ಸಾವಿರ ಹಣ ಕೊಡುತ್ತಿದ್ದೇವೆ. ಇದಕ್ಕಾಗಿ ಸರ್ಕಾರ 32 ಸಾವಿರ ಕೋಟಿ ಖರ್ಚು ಮಾಡುತ್ತಿದೆ. ನಾವು ಜಾರಿಗೆ ತಂದಿರುವ ಎಲ್ಲ ಐದು ಗ್ಯಾರಂಟಿಗಳಿಗಾಗಿ ಒಟ್ಟು 57 ಸಾವಿರ ಕೋಟಿ ಖರ್ಚು ಮಾಡುತ್ತಿದ್ದೇವೆ. ಬಿಜೆಪಿಗರಿಗೆ ಇದನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿದ್ದಾರೆ ಎಂದು ಸುಳ್ಳು ಆರೋಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಾವು ಬಡವರ ಪರವಾಗಿಯೇ ಇರೋದು. ಬಿಜೆಪಿಯಿಂದ ನಾವು ಪಾಠ ಕಲಿಯಬೇಕಿಲ್ಲ. ಅವರು ಮೇಲ್ಜಾತಿಯ, ಶ್ರೀಮಂತರ ಪರ ಇರೋರು. ಅವರು ಯಾವತ್ತೂ ಬಡವರ ಪರ ಧ್ವನಿ ಎತಿಲ್ಲ ಎಂದು ಹೇಳಿದ್ದಾರೆ.