ಬೆಂಗಳೂರು: ಮದ್ಯ ಮಾರಾಟಗಾರರು ನ. 20ರಂದು ಬಂದ್ ಗೆ ಕರೆ ನೀಡಿದ್ದರು. ಆದರೆ, ಈ ಬಂದ್ ನ್ನು ಹಿಂಪಡೆದಿದ್ದಾರೆ.
ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರ, ವರ್ಗಾವಣೆ, ಪ್ರಮೋಷನ್ ಗೆ ಸನ್ನದುದಾರರಿಂದ ಲಂಚ ಸ್ವೀಕರಿಸಲಾಗುತ್ತಿದೆ ಎಂದು ಆರೋಪಿಸಿ ಮದ್ಯ ಮಾರಾಟಗಾರರು ಬಂದ್ ಗೆ ಕರೆ ನೀಡಿದ್ದರು. ಆದರೆ, ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮದ್ಯ ಮಾರಾಟಗಾರರ ಸಭೆ ಯಶಸ್ವಿಯಾಗಿದ್ದು, ಬಂದ್ ನಿಂದ ಹಿಂದೆ ಸರಿದಿದ್ದಾರೆ.
ಗೃಹ ಕಚೇರಿ ಕೃಷ್ಣದಲ್ಲಿ ಮದ್ಯ ಮಾರಾಟಗಾರರ ಜೊತೆ ಸಿಎಂ ಸಭೆ ನಡೆಸಿದರು. ಸಭೆ ಯಶಸ್ವಿಯಾಗಿದ್ದು ಮುಷ್ಕರ ನಡೆಸುವುದಿಲ್ಲ ಎಂದು ತಿಳಿಸಿದ್ದಾರೆ. ಈ ವೇಳೆ ಮಾತನಾಡಿರುವ ಸಿಎಂ, ಮದ್ಯ ಮಾರಾಟಗಾರರ ಬೇಡಿಕೆ ಕುರಿತು ಪರಿಶೀಲನೆ ನಡೆಸಲಾಗುವುದು. ವ್ಯಾಪಾರ ಹೆಚ್ಚಾಗಿ ಸರ್ಕಾರಕ್ಕೆ ಆದಾಯ ತರುವಂತೆ enforcement ಮಾಡಲಾಗುವುದು. ಮದ್ಯ ಮಾರಾಟಗಾರರಿಗೆ ಕಿರುಕುಳ ನೀಡದಂತೆ ಅಬಕಾರಿ ಆಯುಕ್ತರಿಗೆ ಸೂಚಿಸಲಾಗುವುದು ಎಂದಿದ್ದಾರೆ.
ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ರಾಜ್ಯಪಾಲರಿಗೆ ನಾವು ದೂರು ಕೊಟ್ಟಿಲ್ಲ. ಈ ಬಗ್ಗೆ ಸುಳ್ಳು ಹಬ್ಬಿಸಿದ್ದಾರೆ. ದೂರು ಕೊಟ್ಟವರಿಗೂ ನಮಗೂ ಸಂಬಂಧವೇ ಇಲ್ಲ. ಈ ಬಗ್ಗೆ ಬೇಕಿದ್ದರೆ ಪರಿಶೀಲನೆ ನಡೆಸಿ, ತನಿಖೆ ನಡೆಸಿ ಎಂದು ಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳು ಹೇಳಿದ್ದಾರೆ.