ಬೆಂಗಳೂರು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅವರ ವಿರುದ್ಧ ಪೋಸ್ಟರ್ ಪೇ ಅಭಿಯಾನವನ್ನು ಕಾಂಗ್ರೆಸ್ ನಡೆಸಿತ್ತು. ಇದು ತೀವ್ರ ಚರ್ಚೆಗೆ ಕಾರಣವಾಗಿ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ವೇಳೆ ಬಿಜೆಪಿಗೆ ಎಲ್ಲೆಡೆ ಮುಖಭಂಗವಾಗಿತ್ತು. ಅದು ಚುನಾವಣೆಯ ಮೇಲೆಯೂ ಪರಿಣಾಮ ಬೀರಿತ್ತು. ಆದರೆ, ಈಗ ಈ ಪೋಸ್ಟರ್ ಅಂಟಿಸಿದವರ ಬದುಕು ಮಾತ್ರ ಅತಂತ್ರವಾಗಿದೆ.
ರಾತ್ರೋ ರಾತ್ರಿ ನಗರದ ಹಲವು ಪ್ರದೇಶಗಳಲ್ಲಿ ಪೇ ಸಿಎಂ ಪೋಸ್ಟರ್ ಪತ್ತೆಯಾಗಿದ್ದವು. ಈ ಪೋಸ್ಟರ್ ಅಂಟಿಸಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ ಕೋರ್ಟ್ ಅಲೆದಾಡುವ ಗ್ಯಾರಂಟಿ ಸಿಕ್ಕಿದೆ. ಈ ಪೋಸ್ಟರ್ ಹಿಂದೆ ಪ್ರಿಯಾಂಕ್ ಖರ್ಗೆ, ಸುನಿಲ್ ಕನಗೋಲ್ ಇದ್ದರು ಎನ್ನಲಾಗಿದೆ. ಇದು ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ದೊಡ್ಡ ಸಂಘರ್ಷ ಸೃಷ್ಟಿ ಮಾಡಿತ್ತು. ಹೀಗಾಗಿ ಈ ಕುರಿತು ಬಿಜೆಪಿ ದೂರು ನೀಡಿತ್ತು. ಹೀಗಾಗಿ ಪೋಸ್ಟರ್ ಗಳನ್ನು ಗೋಡೆಗಳಿಗೆ ಅಂಟಿಸಿದ ಆರೋಪದ ಮೇಲೆ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದಲ್ಲಿದ್ದ ಸಂಜಯ್, ವಿಶ್ವ ಮೂರ್ತಿ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಆದರೆ, ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಪ್ರಿಯಾಂಕ್ ಖರ್ಗೆ ಅಧಿಕಾರದಲ್ಲಿದ್ದಾರೆ. ಪೋಸ್ಟರ್ ಅಂಟಿಸಿದವರು ಮಾತ್ರ ಕೋರ್ಟ್ ಗೆ ಅಲೆದಾಡುತ್ತಿದ್ದಾರೆ. ಕೇಸ್ ಹಾಕಿಸಿಕೊಂಡ ಯುವಕರು ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತಂದರೂ ಇದರಿಂದ ಯಾವುದೇ ಪ್ರಯೋಜನ ಆಗಿಲ್ಲವಂತೆ. ಈ ಕುರಿತು ಪೋಸ್ಟ್ ಮಾಡಿ, ಕೋರ್ಟ್ ಗೆ ಅಲೆಯುತ್ತಿರುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಮಂತ್ರಿಗಳ ಮಕ್ಕಳು ಸಂಸತ್ತಿನಲ್ಲಿ. ಬಡವರ ಮಕ್ಳು ಕೋರ್ಟ್ ನಲ್ಲಿ. ಹೋಡಿರಿ ಚಪ್ಪಾಳೆ. ಇದೇ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಣ್ರೀ” ಎಂದು ಪೋಸ್ಟ್ ಮಾಡಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.