ಕಾಂಗ್ರೆಸ್ ನಲ್ಲಿ ಸಿಎಂ ಬದಲವಾಣೆ ಕುರಿತು ಯಾವುದೇ ಚರ್ಚೆಯಾಗಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಅವರನ್ನು ಕಂಡರೆ ಬಿಜೆಪಿಗೆ ಹೊಟ್ಟೆ ಉರಿ. ಹೀಗಾಗಿ ಅವರು ಸಿಎಂ ವಿರುದ್ಧ ಮುಗಿ ಬಿದ್ದಿದ್ದಾರೆ. ಆದರೆ, ನಮ್ಮಲ್ಲಿ ಮಾತ್ರ ಈ ಕುರಿತು ಯಾವುದೇ ಚರ್ಚೆಗಳು ನಡೆದಿಲ್ಲ. ಹೈಕಮಾಂಡ್ ಕೂಡ ಸೂಚನೆ ನೀಡಿಲ್ಲ. ಹೇಗಾದರೂ ಮಾಡಿ ಸಿಎಂ ಅವರಿಗೆ ಮುಖಭಂಗ ಮಾಡಬೇಕೆಂದು ಬಿಜೆಪಿ ಈ ರೀತಿ ಮಾಡುತ್ತಿದೆ. ಅವರು ಸುಮ್ಮನೆ ಆರೋಪ ಮಾಡುತ್ತಾರೆ. ವಿರೋಧ ಪಕ್ಷ ಆಗಿರುವುದರಿಂದ ವಿರೋಧ ಮಾಡುವುದೇ ಅವರ ಕೆಲಸ. ಸಿಎಂ ಬದಲಾಗುವುದನ್ನು ಬಿಜೆಪಿ ಕನಸು ಮಾತ್ರ ಕಾಣಬೇಕು ಎಂದು ಹೇಳಿದ್ದಾರೆ.
ನಾವು ಕೆಂಪಣ್ಣ ಆಯೋಗ ಬರೆದ ಪತ್ರದ ಮೇಲೆ ಹೋರಾಟ ಮಾಡಿದ್ದೆವು. ನಮಗೆ ಅದೇ ದಾಖಲೆ. ಈಗ ಲೋಕಾಯುಕ್ತದವರು ಯಾವ ಆಧಾರದ ಮೇಲೆ ಸಾಕ್ಷಿ ಇಲ್ಲ ಎನ್ನುತ್ತಿದ್ದಾರೆ ಎಂಬುವುದನ್ನು ನೋಡಬೇಕಿದೆ ಎಂದಿದ್ದಾರೆ.
ಶಾಸಕರ ಖರೀದಿಗೆ ಬಿಜೆಪಿ ಪ್ರಯತ್ನಿಸುತ್ತಲೇ ಇದೆ. ಎಷ್ಟು ಕೋಟಿ ಎಂಬುವುದು ಗೊತ್ತಿಲ್ಲ. ಪ್ರಯತ್ನ ಮಾತ್ರ ಅದು ಬಿಟ್ಟಿಲ್ಲ. ಮುಖ್ಯಮಂತ್ರಿಗಳೇ ಕೋಟಿ ವಿಚಾರ ಹೇಳಿದ ಮೇಲೆ ಅದು ಸತ್ಯ ಇರಬಹುದು. ಒಂದು ವೇಳೆ ಈ ವಿಚಾರದ ಕುರಿತು ನಮಗೆ ದಾಖಲೆ ಸಿಕ್ಕರೆ ತನಿಖೆ ನಡೆಸುತ್ತೇವೆ ಎಂದಿದ್ದಾರೆ.
ಜಮೀರ್ ಅಹ್ಮದ್ ಖಾನ್ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷರು ಪಕ್ಷದ ಶಿಸ್ತುಪಾಲನಾ ಸಮಿತಿಗೆ ವರದಿ ಕೊಟ್ಟರೆ ಅದರ ಅಧ್ಯಕ್ಷ ರಹೀಂ ಖಾನ್ ಕ್ರಮ ಕೈಗೊಳ್ಳುತ್ತಾರೆ. ನಾನು ಹಿಂದೆ ಕೂಡ ಶಿಸ್ತುಪಾಲನಾ ಸಮಿತಿ ಸದಸ್ಯನಾಗಿದ್ದೆ. ಪಕ್ಷಕ್ಕೆ ಹಾನಿಯಾಗುವ ಹೇಳಿಕೆ ಕೊಡುವ ನಾಯಕರನ್ನು ಅವರು ಎಷ್ಟೇ ದೊಡ್ಡವರಿದ್ದರೂ ನೋಟಿಸ್ ಕೊಟ್ಟು ಕರೆಸುತ್ತಿದ್ದೆವು. ಅಗತ್ಯವಿದ್ದರೆ ಸಸ್ಪೆಂಡ್ ಕೂಡ ಮಾಡುತ್ತಿದ್ದೆವು ಎಂದಿದ್ದಾರೆ.