ಚೆನ್ನೈ: ತಮಿಳುನಾಡು ಸಿನಿರಂಗದಲ್ಲಿ ಲೇಡಿ ಸೂಪರ್ಸ್ಟಾರ್ ನಯನತಾರಾ ( Nayanthara ) ಮತ್ತು ಸೂಪರ್ಸ್ಟಾರ್ ಧನುಷ್ ವಿಚಾರ ಬಹು ಚರ್ಚೆಯಾಗುತ್ತಿದೆ. ಧನುಷ್ ವಿರುದ್ಧ ನಟಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಈಗ ನಯನತಾರಾ ವಿರುದ್ಧ ತೀವ್ರ ಸೈಬರ್ ದಾಳಿ ನಡೆದಿದೆ.
ಧನುಷ್ ಅವರನ್ನು ಬೆಂಬಲಿಸಿ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ನಯನಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರ ಮದುವೆಯ ಸಾಕ್ಷ್ಯಚಿತ್ರವೇ ಈ ಫೈಟ್ ಗೆ ಕಾರಣ ಎನ್ನಲಾಗುತ್ತಿದೆ. ಇದೇ ನವೆಂಬರ್ 18ರಂದು ‘ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್’ ಹೆಸರಿನಲ್ಲಿ ಮದುವೆಯ ಸಾಕ್ಷ್ಯಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇದರ ನಡುವೆಯೇ ನಯನತಾರಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ.
ವಿಘ್ನೇಶ್ ಶಿವನ್ ನಿರ್ದೇಶನದ ನಾನುಮ್ ರೌಡಿ ಥಾನ್ ಸಿನಿಮಾದಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ನಟ ಧನುಷ್ ಅವರು ಈ ಚಿತ್ರವನ್ನು ನಿರ್ಮಿಸಿದ್ದರು. ಹೀಗಾಗಿ ಈ ಚಿತ್ರದ ಕೆಲವು ಭಾಗಗಳನ್ನು ಸಾಕ್ಷ್ಯಚಿತ್ರದಲ್ಲಿ ಸೇರಿಸಲು ಎನ್‌ಒಸಿ ಪಡೆಯಲು ಎರಡು ವರ್ಷ ಕಾದಿದ್ದೆ ಎಂದು ನಯನತಾರಾ ಆರೋಪಿಸಿದ್ದಾರೆ.
ನಯನತಾರಾ ಧನುಷ್ ವಿರುದ್ಧ ಬಹಿರಂಗ ಪತ್ರ ಬರೆದರೋ ಅದರ ಬೆನ್ನಲ್ಲೇ ನಯನತಾರಾ ಅವರನ್ನು ಟೀಕಿಸಿ ಮತ್ತು ಧನುಷ್ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದೆ.