ನವದೆಹಲಿ: ಸತ್ತರೂ ನನ್ನ ಸಿದ್ಧಾಂತ ಬಿಡುವುದಿಲ್ಲ. ಕಠಿಣ ಶ್ರಮ, ಸಮರ್ಪಣೆ ನಮ್ಮ ಸಂಸ್ಕೃತಿಯಾಗಿದೆ ಎಂದು ಇನ್ಪೋಸಿಸ್ ನಾರಾಯಣ ಮೂರ್ತಿ ಹೇಳಿದ್ದಾರೆ.
ಸಿಎನ್‌ಬಿಸಿ ಗ್ಲೋಬಲ್ ಲೀಡರ್‌ಶಿಪ್ ಶೃಂಗದಲ್ಲಿ ಮಾತನಾಡಿದ ನಾರಾಯಣ ಮೂರ್ತಿ, ಕಾರ್ಪೊರೇಟ್ ಕಂಪೆನಿಗಳಲ್ಲಿ ವಾರದಲ್ಲಿ ಆರು ದಿನ ಕೆಲಸದ ಅವಧಿ ಇರಬೇಕು ಎಂಬ ತಮ್ಮ ವಾದವನ್ನು ಮತ್ತೆ ಮಂಡಿಸಿದ್ದಾರೆ. ಕೆಲಸದ ನೀತಿಗಳು ಮತ್ತು ಉತ್ಪಾದಕತೆ ಕುರಿತಾಗಿ ಹಿಂದಿನಿಂದಲೂ ಅವರು ಹೇಳತ್ತಲೇ ಇದ್ದರು. ಈಗಲು ಅವರು ಅದೇ ವಿಷಯವಾಗಿ ಮಾತನಾಡಿದ್ದು, ನಾನು ಸತ್ತರೂ ನನ್ನ ಸಿದ್ಧಾಂತ ಬಿಡುವುದಿಲ್ಲ ಎಂದಿದ್ದಾರೆ.
1986ರಲ್ಲಿ, ವಾರದ ಆರು ದಿನದ ಕೆಲಸದ ಅವಧಿಯಿಂದ ಐದು ದಿನಕ್ಕೆ ಇಳಿಸಿದ ಭಾರತ ಸರ್ಕಾರದ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ನಾನು ನನ್ನ ಅಭಿಪ್ರಾಯವನ್ನು ಬದಲಿಸಿಲ್ಲ. ಇದನ್ನು ನನ್ನ ಸಮಾಧಿಯವರೆಗೂ ನಾನು ಕೊಂಡೊಯ್ಯುತ್ತೇನೆ ಎಂದ ಹೇಳಿದ್ದಾರೆ.
ಕಷ್ಟಪಟ್ಟು ಕೆಲಸ ಮಾಡುವುದು ರಾಷ್ಟ್ರೀಯ ಪ್ರಗತಿ ಸಾಧಿಸಲು ಬಹಳ ಅವಶ್ಯಕ ಎಂದ ಅವರು, ದಣಿವರಿಯದ ಪರಿಶ್ರಮದ ಬದ್ಧತೆಗಾಗಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಉದಾಹರಣೆ ನೀಡಿದ್ದಾರೆ.
ಮೋದಿ ಅಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿರುವಾಗ, ನಮ್ಮ ಸುತ್ತಲೂ ನಡೆಯುತ್ತಿರುವುದಕ್ಕೆ ನಮ್ಮ ಮೆಚ್ಚುಗೆ ತೋರಿಸಲು ಇರುವ ಏಕೈಕ ಮಾರ್ಗವೆಂದರೆ ಅಷ್ಟೇ ಶ್ರಮವಹಿಸಿ ದುಡಿಯುವುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ತಮ್ಮದೇ ವೃತ್ತಿ ಜೀವನದ ಒಳನೋಟಗಳನ್ನು ಹಂಚಿಕೊಂಡ ನಾರಾಯಣ ಮೂರ್ತಿ, ತಾವು ಪ್ರತಿಪಾದಿಸುವ ಮೌಲ್ಯಗಳಲ್ಲಿಯೇ ತಾವು ಜೀವಿಸುತ್ತಿರುವುದು. ತಮ್ಮ ವೃತ್ತಿ ಬದುಕಿನ ಉದ್ದಕ್ಕೂ ಕೆಲಸ ಮಾಡುತ್ತಲೇ ಇದ್ದೇನೆ. ದಿನಕ್ಕೆ 14 ಗಂಟೆ ದುಡಿಯುತ್ತಿದ್ದು, ವಾರದಲ್ಲಿ ಆರೂವರೆ ದಿನ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಬೆಳಿಗ್ಗೆ 6.30ಕ್ಕೆ ಕಚೇರಿಗೆ ಹೋದರೆ, ರಾತ್ರಿ 8.40ರ ನಂತರ ಮನೆಗೆ ಮರಳುತ್ತೇನೆ. ಈ ಬದ್ಧತೆಗೆ ಹೆಮ್ಮೆ ಇದೆ ಎಂದಿದ್ದಾರೆ. ಅಲ್ಲದೇ, ಈ ವೇಳೆ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಲು ಸಿದ್ಧರಿರಬೇಕು ಎಂದು ಹೇಳಿದ್ದಾರೆ.