ಬೆಂಗಳೂರು: 108 ಆಂಬುಲೆನ್ಸ್ ಸಿಬ್ಬಂದಿಗೆ ಕಳೆದ ಮೂರು ತಿಂಗಳಿಂದ ಸಂಬಳ ಸಿಕ್ಕಿಲ್ಲ. ಹೀಗಾಗಿ ಸರ್ಕಾರದ (Karnataka Government) ವಿರುದ್ಧ ಹೋರಾಟ ನಡೆಸಲು 108 ಅಂಬುಲೆನ್ಸ್ ಸಿಬ್ಬಂದಿ (Ambulance Smployees) ಮುಂದಾಗಿದ್ದಾರೆ.
ನ. 16ರ ರಾತ್ರಿ 8 ಗಂಟೆಯೊಳಗೆ ನಮಗೆ ಸಂಬಳ ಹಾಕದಿದ್ದರೆ, ಆಂಬುಲೆನ್ಸ್ ಸೇವೆಯನ್ನು ಸ್ಥಗಿತಗೊಳಿಸಿ ಹೋರಾಟ ಮಾಡಲಾಗುವುದು ಎಂದು ಸಿಬ್ಬಂದಿ ಹೇಳಿದ್ದಾರೆ. 3 ತಿಂಗಳಿನಿಂದ ನಮಗೆ ಸಂಬಳ (Salary) ಸಿಕ್ಕಿಲ್ಲ ಎಂದು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಬಳ ನೀಡದಿದ್ದರೆ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಸುವರ್ಣ ಕರ್ನಾಟಕ ಆರೋಗ್ಯ ಕವಚ(108) ನೌಕರರ ಸಂಘ, ಅಖಿಲ ಕರ್ನಾಟಕ 108 ಅಂಬುಲೆನ್ಸ್ ನೌಕರರ ಹಿತರಕ್ಷಣಾ ಸಂಘ, ಕರ್ನಾಟಕ ರಾಜ್ಯ ಆರೋಗ್ಯ ಕವಚ(108) ಅಂಬುಲೆನ್ಸ್ ನೌಕರರರ ಸಂಘ ಖಡಕ್ ಆಗಿ ಎಚ್ಚರಿಸಿವೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿವೆ.
ಆರೋಗ್ಯ ಕವಚ ಯೋಜನೆಯಲ್ಲಿ 2 ವರ್ಷಗಳಿಂದ ವೇತನದಲ್ಲಿ ಅನೇಕ ಸಮಸ್ಯಗಳಿವೆ. ಸರ್ಕಾರ, ಸಂಸ್ಥೆ ಮತ್ತು ಸಂಘಟನೆಗಳು ಸಭೆ ನಡೆಸಿದರೂ ವೇತನದ ಸಮಸ್ಯೆ ಮಾತ್ರ ಸರಿಯಾಗಿ ಬಗಹರಿಯುತ್ತಿಲ್ಲ. ಹೀಗಾಗಿ ಸಂಘಟನೆಯು ನ್ಯಾಯಾಲಯದ ಮೊರೆ ಹೋಗಿತ್ತು. ನ್ಯಾಯಾಲಯವು ಸೆಪ್ಟೆಂಬರ್ 12ರಂದು ಮಧ್ಯಂತರ ಆದೇಶ ನೀಡಿತ್ತು. ನ್ಯಾಯಾಲಯ ಆದೇಶ ನೀಡಿದರೂ ಆರೋಗ್ಯ ಇಲಾಖೆ ಅಂಬುಲೆನ್ಸ್ ಸಿಬ್ಬಂದಿಯ ಸಂಬಳದ ಬಗ್ಗೆ ನಿರ್ಲಕ್ಷ್ಯ ತೋರಿದೆ. ಹೀಗಾಗಿ ಸಂಘಟನೆ ಹೋರಾಟದ ಹಾದಿ ತುಳಿದಿರುವುದಾಗಿ ಹೇಳಿದೆ.
ಕೋರ್ಟ್ ಆದೇಶದಂತೆ ಪ್ರತಿ ತಿಂಗಳ 7ನೇ ತಾರೀಖು ವೇತನ ಪಾವತಿಯಾಗಬೇಕು. ಆದರೆ, ಸರ್ಕಾರ ಮಾತ್ರ ಮೂರು ತಿಂಗಳಾದರೂ ಸಂಬಳ ನೀಡಿಲ್ಲ. ಇದರಿಂದಾಗಿ ಆಂಬುಲೆನ್ಸ್ ಸಿಬ್ಬಂದಿಗಳ ಕುಟುಂಬಗಳು ಬೀದಿಗೆ ಬರುವಂತಾಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳುತ್ತದಾ ಕಾಯ್ದು ನೋಡಬೇಕಿದೆ.