ಬೆಂಗಳೂರು: ಶಬರಿಮಲೆ ಅಯ್ಯಪ್ಪ ಸ್ವಾಮಿಯ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಹೀಗಾಗಿ ಅಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರ ಸಂಖ್ಯೆ ಏರಿಕೆಯಾಗುತ್ತಿದೆ. ಹೀಗಾಗಿ ಆನ್ ಲೈನ್ ಮೂಲಕವೇ ಇದನ್ನೆಲ್ಲ ನೋಡಿಕೊಂಡು ದರ್ಶನಕ್ಕೆ ಬರುವ ವ್ಯವಸ್ಥೆಯನ್ನು ಈ ವರ್ಷದಿಂದ ಮಾಡಲಾಗುತ್ತಿದೆ.
ಈ ವ್ಯವಸ್ಥೆ ಈ ವರ್ಷದಿಂದ ಜಾರಿಗೆ ಬರಲಿದೆ. ಸನ್ನಿಧಾನದಲ್ಲಿ ಭಕ್ತರ ನಿಬಿಡತೆ, ವೇಳಾಪಟ್ಟಿ ಮತ್ತು ಇತರ ವ್ಯವಸ್ಥೆಗಳ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ತಿಳಿಸಲಾಗುವುದು. ಆನ್‌ಲೈನ್ ಬುಕ್ಕಿಂಗ್ ಸೈಟ್‌ನಲ್ಲಿ ತೋರಿಸಲಾಗುವ ಡ್ಯಾಶ್‌ಬೋರ್ಡ್ ಮೂಲಕ ಭಕ್ತರಿಗೆ ಇದು ಲಭ್ಯವಾಗಲಿದೆ. ಪತ್ತನಂತಿಟ್ಟ ಜಿಲ್ಲಾಡಳಿತ ಇದನ್ನು ಅನುಷ್ಠಾನಗೊಳಿಸುತ್ತಿದೆ.
ಪ್ರತಿ ದಿನದ ಬುಕ್ಕಿಂಗ್ ಸಂಖ್ಯೆ ಮತ್ತು ದಟ್ಟಣೆ ಸ್ಥಿತಿ ಗತಿಗಳನ್ನು ಡ್ಯಾಶ್‌ಬೋರ್ಡ್ ಹೇಳಲಿದೆ. ಪೊಲೀಸ್ ಮತ್ತು ಇತರ ಉದ್ಯೋಗಿಗಳಿಗೂ ದಟ್ಟಣೆ ದಿನಗಳನ್ನು ಮುಂದಾಗಿ ತಿಳಿದು ಹೆಚ್ಚಿನ ಸಿಬ್ಬಂದಿ ನಿಯೋಜನೆ ಮತ್ತು ಪಾರ್ಕಿಂಗ್ ಸೌಲಭ್ಯಗಳ ಸಿದ್ಧತೆ ಮಾಡಲು ಸಾಧ್ಯವಾಗುವುದು. ಜನಸಂದಣಿ ಇಲ್ಲದ ದಿನಗಳನ್ನು ಮುಂಚಿತವಾಗಿ ತಿಳಿದು ಭಕ್ತರು ಬುಕ್ಕಿಂಗ್ ಮಾಡಬಹುದು. ಆನ್ ಲೈನ್ ಮೂಲಕವೇ ಭಕ್ತರು ಬುಕ್ ಮಾಡಬಹುದು.
ಅಲ್ಲದೇ, ಶಬರಿಮಲೆ ಯಾತ್ರೆಗೆ ಸಂಬಂಧಿಸಿದ ಪ್ರಶ್ನೆ, ಅನುಮಾನಗಳ ಪರಿಹಾರಕ್ಕಾಗಿ ವಾಟ್ಸ್‌ಆ್ಯಪ್ ಚಾಟ್ ಬೋಟ್ ವ್ಯವಸ್ಥೆ ಜಾರಿಗೆ ಬರಲಿದೆ. ಎಐ ಆಧರಿಸಿ ಕಾರ್ಯಾಚರಿಸುವ ಈ ವ್ಯವಸ್ಥೆಯಲ್ಲಿ ಎಲ್ಲ ಅನುಮಾನಗಳಿಗೆ ಉತ್ತರ ನೀಡಲಾಗುವುದು. ಕೆಎಸ್‌ಆರ್‌ಟಿಸಿ ವೇಳಾಪಟ್ಟಿ, ಹತ್ತಿರದ ಬಸ್ ನಿಲ್ದಾಣ, ರೈಲು ನಿಲ್ದಾಣ, ದೇವಸ್ಥಾನಗಳು, ಹೋಟೆಲ್‌ಗಳು, ವಸತಿ ಕೇಂದ್ರಗಳು ಸೇರಿದಂತೆ ಎಲ್ಲ ಪ್ರಶ್ನೆಗಳಿಗೆ ವಾಟ್ಸ್ ಆಪ್ ಚಾಟ್ ಬೋಟ್ ಉತ್ತರಿಸಲಿದೆ. ಇದು ಮಲಯಾಳಂ, ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಮಾಹಿತಿ ತಿಳಿಸಲಿದೆ.
ಮಂಡಲ- ಮಕರಜ್ಯೋತಿ ಯಾತ್ರೆಗೆ ಶಬರಿಮಲೆ ಅಯ್ಯಪ್ಪ ದೇಗುಲ ನವೆಂಬರ್ 15 ರಂದು ಸಂಜೆ 5ಕ್ಕೆ ತೆರೆಯಲಿದೆ. ಲಕ್ಷಾಂತರ ಭಕ್ತರು ಪ್ರತಿ ವರ್ಷ ಅಯ್ಯಪ್ಪನ ದರ್ಶನ ಮಾಡುತ್ತಾರೆ.