ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ನಾಲ್ಕು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯದಲ್ಲೂ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಶೂನ್ಯಕ್ಕೆ ಬಲಿಯಾಗಿದ್ದಾರೆ.
ಟಾಸ್ ಸೋತ ಭಾರತ ಮತ್ತೆ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಈ ಪಂದ್ಯದಲ್ಲೂ ಕೂಡ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಸಂಜು, ಸತತ ಎರಡನೇ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸವನ್ನು ಅಬ್ಬರದಿಂದಲೇ ಆರಂಭಿಸಿದ್ದ ಸಂಜು, 4 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಈಗ ದಿಢೀರ್ ಫಾರ್ಮ್ ಕಳೆದುಕೊಂಡಿದ್ದಾರೆ. ಸರಣಿಯ ಎರಡನೇ ಪಂದ್ಯದಲ್ಲಿ ಖಾತೆ ತೆರೆಯದ ಸಂಜು, ಮೂರನೇ ಪಂದ್ಯದಲ್ಲೂ ಸೊನ್ನೆ ಸುತ್ತಿದ್ದಾರೆ. ಈ ಮೂಲಕ ಮತ್ತೊಂದು ದಾಖಲೆ ಬರೆದಿದ್ದಾರೆ.
ಸಂಜು ಸ್ಯಾಮ್ಸನ್ ಟಿ20ಯಲ್ಲಿ ಇಲ್ಲಿಯವರೆಗೆ ಭಾರತದ ಪರ 32 ಇನ್ನಿಂಗ್ಸ್ ಆಡಿದ್ದು, ಈ ಅವಧಿಯಲ್ಲಿ 6 ಬಾರಿ ಖಾತೆ ತೆರೆಯದೆ ಔಟಾಗಿದ್ದಾರೆ. ಅದೇ ಸಮಯದಲ್ಲಿ, ಈ ವರ್ಷ ಅವರು 5 ಬಾರಿ ಶೂನ್ಯಕ್ಕೆ ಔಟ್ ಆಗಿದ್ದಾರೆ. ಈ ಮೂಲಕ ಒಂದು ವರ್ಷದಲ್ಲಿ 5 ಬಾರಿ ಖಾತೆ ತೆರೆಯದೆ ಔಟ್ ಆದ ಭಾರತದ ಮೊದಲ ಬ್ಯಾಟ್ಸ್ಮನ್ ಎಂಬ ಕೆಟ್ಟ ದಾಖಲೆ ಬರೆದಿದ್ದಾರೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್ ಈಗ ಮೂರನೇ ಸ್ಥಾನ ಪಡೆದಿದ್ದಾರೆ. ಮೊದಲ ಸ್ಥಾನದಲ್ಲಿರುವ ರೋಹಿತ್ ಶರ್ಮಾ ಇಲ್ಲಿಯವರೆಗೆ 12 ಬಾರಿ ಸೊನ್ನೆ ಸುತ್ತಿದ್ದರೆ, ವಿರಾಟ್ ಕೊಹ್ಲಿ 7 ಬಾರಿ ಶೂನ್ಯಕ್ಕೆ ಔಟಾಗುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.
ಟಿ20 ಕ್ರಿಕೆಟ್ ನಲ್ಲಿ ಅಧಿಕ ಬಾರಿ ಸೊನ್ನೆಗೆ ಔಟಾದ ಭಾರತೀಯ ವಿಕೆಟ್ ಕೀಪರ್‌ಗಳ ಪಟ್ಟಿಯಲ್ಲೂ ಸಂಜು ಮೊದಲ ಸ್ಥಾನದಲ್ಲಿದ್ದಾರೆ. 4 ಬಾರಿ ಸೊನ್ನೆ ಸುತ್ತಿರುವ ರಿಷಬ್ ಪಂತ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.