ಕನ್ನಡಿಗ ಕೆ.ಎಲ್. ರಾಹುಲ್ ಐಪಿಎಲ್ ಸೀಸನ್-18 ರಲ್ಲಿ ಆರ್ ಸಿಬಿ ಜರ್ಸಿ ತೊಡಲು ಉತ್ಸುಕರಾಗಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಹೊರಬಂದಿರುವ ರಾಹುಲ್ ಮೆಗಾ ಹರಾಜಿನಲ್ಲಿ ಕಾಣಿಸಲಿದ್ದಾರೆ. ಹೀಗಾಗಿ ಕನ್ನಡಿಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮರಳಿ ಬರುವರೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.
ಕೆಎಲ್ ರಾಹುಲ್ ಈ ಹಿಂದಿನಿಂದಲೂ ತವರು ತಂಡದ ಪರ ಕಣಕ್ಕಿಳಿಯುವ ಕನಸನ್ನು ವ್ಯಕ್ತಪಡಿಸುತ್ತಲೇ ಇದ್ದರು. ಸಂದರ್ಶನವೊಂದರಲ್ಲಿ ರಾಹುಲ್, ನಾನು ಕನ್ನಡಿಗ. ನನ್ನನ್ನು ಎಲ್ಲರೂ ಕನ್ನಡಿಗ ಅಂತಾನೇ ಕರೀತಾರೆ. ಹೀಗಾಗಿ ನಾನು 2016 ರಲ್ಲಿ ಆರ್ಸಿಬಿ ಪರ ಆಡಿದ್ದು ಖುಷಿ ನೀಡಿತ್ತು. ಆಗ ನಾನು ನನ್ನ ಆಟವನ್ನು ಎಂಜಾಯ್ ಮಾಡಿದ್ದೆ ಎಂದಿದ್ದಾರೆ.
ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕನ್ನಡಿಗನ ಖರೀದಿಗೆ ಬಿಡ್ ಮಾಡುವುದು ಅತ್ಯುತ್ತಮ ಆಯ್ಕೆ. ಏಕೆಂದರೆ ನಾಯಕ ಫಾಫ್ ಡುಪ್ಲೆಸಿಸ್ ಆರ್ಸಿಬಿ ತಂಡದಿಂದ ಹೊರಬಿದ್ದಿದ್ದು, ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ರಾಹುಲ್ ಆ ಸ್ಥಾನಗಳನ್ನು ತುಂಬಬಹುದು. ಹೀಗಾಗಿ ಕನ್ನಡಿಗ ಹುಡುಗ ನಮಗೆ ಬೇಕು ಎಂದು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ.
ಕೆಎಲ್ ರಾಹುಲ್ ಆರ್ಸಿಬಿ ಪರ ಒಟ್ಟು 19 ಪಂದ್ಯಗಳನ್ನಾಡಿದ್ದಾರೆ. 14 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಅವರು 4 ಅರ್ಧಶತಕಗಳೊಂದಿಗೆ ಒಟ್ಟು 417 ರನ್ ಗಳಿಸಿದ್ದಾರೆ. ಆದರೆ, ರಾಹುಲ್ ಯಾವ ತಂಡಕ್ಕೆ ಆಯ್ಕೆಯಾಗುತ್ತಾರೆ ಎಂಬುವುದನ್ನು ನೋಡಬೇಕಿದೆ.