ಬೆಂಗಳೂರು: ವಾಲ್ಮೀಕಿ ಹಗರಣದಲ್ಲಿ ಹೆಸರು ಥಳುಕ ಹಾಕಿಕೊಳ್ಳುತ್ತಿದ್ದಂತೆ ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಈಗ ಜೈಲಿನಿಂದ ಅವರು ಹೊರ ಬಂದಿದ್ದು, ಮತ್ತೆ ಮಂತ್ರಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಕುರಿತು ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಸುಳಿವು ನೀಡಿದ್ದಾರೆ. ಜಾರಿ ನಿರ್ದೇಶನಾಲಯ (ಇ.ಡಿ) ವಾಲ್ಮೀಕಿ ಹಗರಣದ ತನಿಖೆಯನ್ನು ನಡೆಸಿದ್ದರೆ, ಇತ್ತ ಸಿಎಂ, ನಾಗೇಂದ್ರಗೆ ಮತ್ತೆ ಸಚಿವ ಸ್ಥಾನ ನೀಡುವ ಸುಳಿವು ಕೊಟ್ಟಿದ್ದಾರೆ. ಮೈಸೂರು ಜಿಲ್ಲೆ H.D.ಕೋಟೆಯಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ವಾಲ್ಮೀಕಿ ನಿಗಮದಲ್ಲಿ ಕೆಲ ಹಣ ದುರುಪಯೋಗ ಆಗಿದೆ. ಆ ಪ್ರಕರಣದ ತನಿಖೆ ನಡೆಯುತ್ತಿದೆ. ಆದರೂ ನಿಗಮಕ್ಕೆ ಒಂದು ಪೈಸೆಯೂ ಕಡಿಮೆ ಮಾಡಲ್ಲ. ನನ್ನ ಬಳಿಯೇ ಈಗ ಆ ಖಾತೆ ಇದ., ಹಣ ಮೀಸಲಿಡುತ್ತೇನೆ. ಶಾಸಕ ಬಿ.ನಾಗೇಂದ್ರ ಮೇಲೂ ಸುಳ್ಳು ಕೇಸ್ ಹಾಕಿಸಿದ್ದಾರೆ. ನಾಗೇಂದ್ರಗೆ ಈಗ ಬೇಲ್ ಸಿಕ್ಕಿದೆ, ಹೊರಗಡೆ ಬಂದಿದ್ದಾರೆ. ಚುನಾವಣೆ ನಂತರ ಮುಂದಿನ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.
ಈ ಮೂಲಕ ಅವರು ನಾಗೇಂದ್ರ ಅವರಿಗೆ ಮತ್ತೆ ಮಂತ್ರಿ ಸ್ಥಾನ ನೀಡುವ ಸುಳಿವು ನೀಡಿದ್ದಾರೆ. ಅಲ್ಲದೇ, ಎಚ್. ಡಿ. ಕೋಟೆಯಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಅನಿಲ್ ಚಿಕ್ಕಮಾದುಗೆ ಸಚಿವ ಸ್ಥಾನ ನೀಡುವಂತೆ ಅವರ ಬೆಂಬಲಿಗರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಸಚಿವ ಸ್ಥಾನ ಕೊಡಲು ಆಗಲ್ಲ. ಕೊಡುತ್ತೇನೆ ಎಂದು ಸುಳ್ಳು ಹೇಳಲು ಆಗಲ್ಲ. ಈಗ ಹೇಳಿ ಆ ನಂತರ ಮಾತಿಗೆ ತಪ್ಪಲು ಆಗುತ್ತಾ? ನಾಗೇಂದ್ರ ಅವರಿಗೆ ಕೊಡಬೇಕು. ಕೊಡುತ್ತೇನೆ ಎಂದರು. ಹೀಗಾಗಿ ನಾಗೇಂದ್ರ ಅವರು ಮತ್ತೆ ಮಂತ್ರಿಯಾಗುವುದು ಖಚಿತವಾದಂತೆ ಆಗಿದೆ.