ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಡ್ರಗ್ಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಗರ ಪೊಲೀಸರು ಡ್ರಗ್ಸ್ ವಿರುದ್ಧ ಸಮರ ಸಾರಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಕಳೆದ 1 ತಿಂಗಳಲ್ಲಿ 42 ಗಾಂಜಾ (Ganja), ಡ್ರಗ್ಸ್ (Drugs) ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 10 ವಿದೇಶಿ ಪ್ರಜೆಗಳು ಸೇರಿದಂತೆ ಬರೋಬ್ಬರಿ 64 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ (B Dayananda) ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 64 ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರಿಂದ 140 ಕೆಜಿ ಗಾಂಜಾ, 1 ಕೆಜಿ ಗಾಂಜಾ ಆಯಿಲ್, 609 ಗ್ರಾಂ ಆಫೀಮು, 770 ಗ್ರಾಂ ಹೆರಾಯಿನ್, 2. 436 ಕೆಜಿ ಚರಸ್, 509 ಗ್ರಾಂ ಕೊಕೇನ್, 5 ಕೆಜಿ 397 ಗ್ರಾಂ ಎಂಡಿಎಂಎ, 2569 LSD ಸ್ಟ್ರಿಪ್, 6 ಕೆಜಿ 725 ಗ್ರಾಂ ಅಂಫಟಮೈನ್, 11,908 ಎಕ್ಸ್ ಟೆಸಿ ಮಾತ್ರೆ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ನಡೆದ ರೇವ್ ಪಾರ್ಟಿಯ ಆರೋಪಿಗಳು ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕುರಿತು ಸಿಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.