11ನೇ ಪ್ರೊ ಕಬಡ್ಡಿ ಆವೃತ್ತಿಯಲ್ಲಿ ಹಲವು ತಂಡಗಳ ಮಧ್ಯೆ ಬಾರೀ ಜಿದ್ದಾಜಿದ್ದಿ ನಡೆಯುತ್ತಿದೆ. ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ 40-27 ಅಂಕಗಳಿಂದ ಗುಜರಾತ್ ಜೈಂಟ್ಸ್ ತಂಡ ಮಣಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿತ ಕಂಡಿದೆ.
ಪಾಟ್ನಾ ತಂಡ ಇಲ್ಲಿಯವರೆಗೆ ಆಡಿರುವ 8 ಪಂದ್ಯಗಳಲ್ಲಿ 5 ಜಯ, 3 ಸೋಲು ಕಂಡು ಒಟ್ಟು 27 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಜಿಗಿದ್ದೆ. ಗುಜರಾತ್ ಜೈಂಟ್ಸ್ ಟೂರ್ನಿಯಲ್ಲಿ ಏಳನೇ ಸೋಲು ಕಂಡು ಹೀನಾಯ ಪ್ರದರ್ಶನ ನೀಡುತ್ತಿದೆ.
ಸೋಮವಾರದ ಮೊದಲ ಪಂದ್ಯದ ಆರಂಭದಿಂದಲೂ ಪಾಟ್ನಾ ಪೈರೇಟ್ಸ್ ಉತ್ತಮ ಪ್ರದರ್ಶನ ನೀಡುತ್ತ ಸಾಗಿತು. ಮೊದಲ ಅರ್ಧ ಅವಧಿಯಲ್ಲಿ ಪಾಟ್ನಾ ಅಂಕ ಮುಂದೆ ಇತ್ತು. ಆನಂತರ ಗುಜರಾತ್ ಒಂದು ಬಾರಿ ಆಲೌಟ್ ಆಯಿತು. ಎರಡನೇ ಅವಧಿಯ ಆಟದಲ್ಲಿ ಗುಜರಾತ್ ಜೈಂಟ್ಸ್ ತಂತ್ರವನ್ನು ಮೆಟ್ಟಿನಿಂತ ಪಾಟ್ನಾ ಅಂಕಗಳನ್ನು ಹೆಚ್ಚಿಸುತ ಸಾಗಿತು.
ಪಾಟ್ನಾ 40 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 18 ರಲ್ಲಿ ಅಂಕ ಸಂಪಾದಿಸಿತು. ಜೈಂಟ್ಸ್ 39 ಬಾರಿ ದಾಳಿ ನಡೆಸಿ 8 ಅಂಕಗಳನ್ನು ಸೇರಿಸಿತು. ಗುಜರಾತ್ ಟ್ಯಾಕಲ್‌ನಲ್ಲಿ 25 ಬಾರಿ ಪ್ರಯತ್ನ ಸಾಧಿಸಿ 10 ಅಂಕ ಗಳಿಸಿದರೆ, ಪಾಟ್ನಾ 19 ಅಂಕ ಸಂಪಾದಿಸಿತು. ಪರಿಣಾಮ ಪಾಟ್ನಾ ಪೈರೇಟ್ಸ್ 40-27ರಲ್ಲಿ ಗೆಲುವು ಸಾಧಿಸಿತು.
ನಂತರ ನಡೆದ ಎರಡನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ 48-39 ರಿಂದ ಯು ಮುಂಬಾ ತಂಡ ಮಣಿಸಿ, ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯಿತು. 8 ಪಂದ್ಯಗಳಲ್ಲಿ 6 ಜಯ, 2 ಸೋಲು ಕಂಡಿರುವ ಸ್ಟೀಲರ್ಸ್ 31 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿ ಕುಳಿತುಕೊಂಡಿದೆ. ಮಂಬಾ ಮೂರನೇ ಸ್ಥಾನ ಪಡೆಯುವಲ್ಲಿ ಸಫಲವಾಗಿದೆ. ವಿಜೇತ ತಂಡದ ಪರ ಮೊಹಮ್ಮದ್ರೇಜಾ 10 ಅಂಕ ಹಾಗೂ ವಿಶಾಲ್ ಹಾಗೂ ಶಿವಂ ಪಟಾರೆ ತಲಾ 11 ಅಂಕಗಳನ್ನು ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಮುಂಬಾ ತಂಡ ಪರ ಅಜಿತ್ ಚೌಹಾಣ್ ಏಕಾಂಗಿ ಹೋರಾಟ ನಡೆಸಿ, 18 ಅಂಕಗಳನ್ನು ಸಂಪಾದಿಸಿದರು.
ಮಂಗಳವಾರ ನಡೆಯುವ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಎದುರಿಸಲಿದೆ.