ಶಿಮ್ಲಾ: ಕಾಣೆಯಾದ ಸಮೋಸ ಬಗ್ಗೆ ತನಿಖೆಗೆ ಸರ್ಕಾರ ಸೂಚಿಸಿದೆ.
ಹಿಮಾಚಲ ಪ್ರದೇಶ ಸಿಎಂ ಸುಖ್ವಿಂದರ್ ಸುಖು ಅವರಿಗೆ ತರಿಸಲಾಗಿದ್ದ ಸಮೋಸಾ ಹಾಗೂ ಕೇಕ್ಗಳನ್ನು (Cake-Samosa) ಅವರ ಭದ್ರತಾ ಸಿಬ್ಬಂದಿಗೆ ಸರ್ವ್ ಮಾಡಲಾಗಿದೆ ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಗೆ ಕಾಂಗ್ರೆಸ್ ಸರ್ಕಾರ ಆದೇಶಿಸಿದೆ. ಈ ವಿಚಾರ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಮುಖ್ಯಮಂತ್ರಿಗೆ ತಂದಿದ್ದ ಸಮೋಸವನ್ನು ಭದ್ರತಾ ಸಿಬ್ಬಂದಿಗೆ ನೀಡಿರುವುದು ಈಗ ಸಿಐಡಿ (CID) ತನಿಖೆವರೆಗೂ ಹೋಗಿದೆ. ಸಿಐಡಿ ಕೂಡ ಈ ಘಟನೆಯನ್ನು ಸರ್ಕಾರಿ ವಿರೋಧಿ ಕೃತ್ಯ ಎಂದಿದೆ. ಬಿಜೆಪಿ ಈ ವಿಚಾರಕ್ಕೆ ತೀವ್ರ ವಾಗ್ದಾಳಿ ನಡೆಸಿದೆ.
ಅ. 21 ರಂದು ಸಿಐಡಿ ಕೇಂದ್ರ ಕಚೇರಿ ಕಾರ್ಯಕ್ರಮಕ್ಕಾಗಿ ತೆರಳಿದ್ದ ಸಿಎಂಗೆ ನೀಡಲು ಲಕ್ಕರ್ ಬಜಾರ್‌ನ ರಾಡಿಸನ್ ಬ್ಲೂ ಹೋಟೆಲ್ ನಿಂದ ಮೂರು ಬಾಕ್ಸ್ ಗಳಲ್ಲಿ ಸಮೋಸ ಮತ್ತು ಕೇಕ್ ಗಳನ್ನು (Cake-Samosa) ತರಿಸಲಾಗಿತ್ತು. ಆದರೆ ಸಿಎಂಗೆ ನೀಡುವ ಬದಲು ಅದನ್ನು ಅವರ ಭದ್ರತಾ ಸಿಬ್ಬಂದಿಗೆ ನೀಡಲಾಗಿತ್ತು. ಉದ್ದೇಶ ಪೂರ್ವಕವಾಗಿ ಈ ರೀತಿ ಮಾಡಲಾಗಿದೆ ಎಂಬ ಆರೋಪ ಈಗ ಕೇಳಿ ಬಂದಿತ್ತು. ಹೀಗಾಗಿ ಸಿಐಡಿ ತನಿಖೆ ನಡೆಸಿತ್ತು.
ಆದರೆ, ಈ ವಿಚಾರವಾಗಿ ವ್ಯಂಗ್ಯವಾಡಿರುವ ಪ್ರತಿಪಕ್ಷ ಬಿಜೆಪಿ, ಸಣ್ಣಪುಟ್ಟ ವಿಷಯಗಳಿಗೆ ತನಿಖೆ ನಡೆಸುವ ಬದಲು ಸಿಎಂ ಕಚೇರಿಯಿಂದ ಸೆಕ್ರೆಟರಿಯೇಟ್‌ವರೆಗಿನ ಹಲವು ಹಗರಣಗಳ ಬಗ್ಗೆ ಮೊದಲು ಗಮನಹರಿಸಬೇಕಿದೆ ಎಂದು ಕಿಡಿಕಾರಿದೆ.