ಬೆಂಗಳೂರು: ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನ. 13ರಂದು ನಡೆಯಲಿದ್ದು, ಇಂದು ಸಂಜೆಯಿಂದ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಅಲ್ಲದೇ, ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ.
ರಾಜ್ಯದ ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಇಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಅಲ್ಲದೇ, ಕ್ಷೇತ್ರದ ವ್ಯಾಪ್ತಿಯಲ್ಲಿ ಎರಡು ದಿನ ಮದ್ಯ ಮಾರಾಟ ಬಂದ್ ಮಾಡಲಾಗಿದೆ. ಈ ಮೂರು ಕ್ಷೇತ್ರಗಳು ಕಾಂಗ್ರೆಸ್ ಹಾಗೂ ಎನ್ ಡಿಎ ಮೈತ್ರಿಗೆ ಮಹತ್ವದ್ದಾಗಿದೆ. ಇಂದು ಕ್ಷೇತ್ರದ ಮತದಾರರಲ್ಲದವರು ಕೂಡಲೇ ಕ್ಷೇತ್ರ ಬಿಟ್ಟು ಹೊರಹೋಗಬೇಕು. ನಾಳೆಯಿಂದ ಎರಡು ದಿನ ಅಭ್ಯರ್ಥಿಗಳು ಮನೆ ಮನೆ ಪ್ರಚಾರ ಮಾಡಲು ಮಾತ್ರ ಅವಕಾಶವಿರುತ್ತದೆ.
ನವೆಂಬರ್ 13 ರಂದು ಮತದಾನ ನಡೆಯಲಿರುವುದರಿಂದ ಶಿಗ್ಗಾಂವಿ, ಚನ್ನಪಟ್ಟಣ ಮತ್ತು ಸಂಡೂರು ಮೂರು ಕ್ಷೇತ್ರ ವ್ಯಾಪ್ತಿಯಲ್ಲಿ ಎರಡು ದಿನ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ. ಇಂದು ಸಂಜೆ 6 ಗಂಟೆಯಿಂದ ನವೆಂಬರ್ 14 ರ ಬೆಳಗ್ಗೆ 6 ಗಂಟೆಯವರೆಗೂ ಮದ್ಯ ಮಾರಾಟ ಬಂದ್ ಆಗಿರುತ್ತದೆ. ಹೀಗಾಗಿ ಮದ್ಯ ಮಾರಾಟಗಾರರು ಈಗಲೇ ಮದ್ಯ ಖರೀದಿಸಲು ಮುಗಿ ಬಿದ್ದಿದ್ದರು. ಮೂರು ಪಕ್ಷಗಳು ಬಿರುಸಿನ ಪ್ರಚಾರ ಕೈಗೊಂಡಿದ್ದು, ಗೆಲ್ಲಲು ಶತಾಯಗತಾಯ ಪ್ರಯತ್ನಿಸಿವೆ. ಹೀಗಾಗಿ ಆರೋಪ- ಪ್ರತ್ಯಾರೋಪಗಳು ಸಾಮಾನ್ಯವಾಗಿದ್ದವು.