ಹಾವೇರಿ: ರಾಜ್ಯ ಸರ್ಕಾರ ಅಬಕಾರಿ ಇಲಾಖೆಯಿಂದ 700 ಕೋಟಿ ರೂ. ಲೂಟಿ ಮಾಡಿದೆ ಎಂಬ ಆರೋಪವನ್ನು ಪ್ರಧಾನಿ ಮಾಡಿದ್ದು, ಅದು ಸಾಬೀತಾದರೆ ನಾನು ರಾಜಕೀಯ ನಿವೃತ್ತಿ ಪಡೆಯುವೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಶಿಗ್ಗಾಂವಿಯಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಆರೋಪ ಸಾಬೀತು ಪಡಿಸಲು ಆಗದಿದ್ದರೆ ನೀವು ರಾಜಕೀಯ ನಿವೃತ್ತಿಯಾಗಬೇಕು ಎಂದು ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ದೇಶದ ಪ್ರಧಾನಿ ಇಷ್ಟೊಂದು ಸುಳ್ಳು ಆರೋಪ ಮಾಡಬಾರದು. ಇತಿಹಾಸದಲ್ಲೇ ಸುಳ್ಳು ಹೇಳುವ ಪ್ರಧಾನಿಯನ್ನು ನೋಡಿರಲಿಲ್ಲ. ಸೋಲಿನ ದು:ಸ್ವಪ್ನದಿಂದ ಪ್ರಧಾನಿ ಮೋದಿ ಅವರು ಇನ್ನೂ ಹೊರಬಂದಿಲ್ಲ ಎಂದು ಕಾಣಿಸುತ್ತದೆ. ರಾಜ್ಯದ ಮದ್ಯ ಮಾರಾಟಗಾರರು ನೀಡಿರುವ ರಾಜಕೀಯ ಪ್ರೇರಿತ ದೂರು ಅಷ್ಟು ಬೇಗ ಮೋದಿ ತಲುಪಿದೆ ಎಂದು ವ್ಯಂಗ್ಯವಾಡಿದ್ದಾರೆ.
2014ರ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲೇ ಭರವಸೆ ನೀಡಿದ್ದರು. ವಕ್ಫ್ ಆಸ್ತಿ ಅತಿಕ್ರಮಣ ತೆರವುಗೊಳಿಸುವುದಾಗಿ ಭರವಸೆ ನೀಡಿದ್ದರು. ಬಳಿಕ ಕಾಂಗ್ರೆಸ್ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.