ಪೆಪ್ಸಿಕೊ, ಯೂನಿಲಿವರ್ ಹಾಗೂ ಡ್ಯಾನೋನ್ ನಂತಹ ಆಹಾರ ಉತ್ಪನ್ನಗಳನ್ನು ತಯಾರಿಸುವ ಸಂಸ್ಥೆಗಳು ಭಾರತ ಸೇರಿದಂತೆ ಬಡ ರಾಷ್ಟ್ರಗಳಿಗೆ ಕಡಿಮೆ ಗುಣಮಟ್ಟದ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಕುರಿತು ವರದಿಯೊಂದು ಹೇಳಿದೆ.
ಆಕ್ಸೆಸ್ ಟು ನ್ಯೂಟ್ರಿಷನ್ ಇನಿಶಿಯೇಟಿವ್ ಹೆಸರಿನ ಅಂತಾರಾಷ್ಟ್ರೀಯ ಎನ್ ಜಿಒ ಪ್ರಕಟಿಸಿದ ವರದಿಯಂತೆ, ಪೆಪ್ಸಿಕೋ ಕಂಪನಿ ತಯಾರಿಸುವ ಚಿಪ್ಸ್ ಮತ್ತು ಟ್ರೋಪಿಕಾನಾ ಜ್ಯೂಸ್ ಉತ್ಪನ್ನಗಳು ನ್ಯೂಟ್ರಿ – ಸ್ಕೋರ್ ಎ, ಬಿ ಹೊಂದಿವೆ. ಆದರೆ, ಆರೋಗ್ಯಕರ ಉತ್ಪನ್ನಗಳನ್ನು ಕೇವಲ ಯುರೋಪಿಯನ್ ದೇಶಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದೆ.
ಯೂನಿಲಿವರ್‌ನ ಆಹಾರ ಉತ್ಪನ್ನಗಳಲ್ಲಿ ಕ್ವಾಲಿಟಿ ವಾಲ್ಸ್, ಮ್ಯಾಗ್ನಮ್ ಐಸ್ ಕ್ರೀಮ್, ನೋರ್ ಸೂಪ್ ಸೇರಿದಂತೆ ಕೆಲವು ಉತ್ಪನ್ನಗಳು ಕಳಪೆ ಮಟ್ಟದ್ದಾಗಿವೆ. ಈ ಕಂಪನಿಗಳು ಅಭಿವೃದ್ಧಿ ಹೊಂದಿದ ಮತ್ತು ಬಡ ರಾಷ್ಟ್ರಗಳಿಗೆ ಮಾರಾಟ ಮಾಡುವ ಉತ್ಪನ್ನಗಳು ಬೇರೆ ಬೇರೆಯಾಗಿವೆ. ಇದೇ ಮೊದಲ ಬಾರಿಗೆ ಈ ರೀತಿ ಹೋಲಿಕೆ ಮಾಡಲಾಗಿದೆ ಎನ್ನಲಾಗಿದೆ.
ಭಾರತ, ಕೀನ್ಯಾ, ಪಾಕಿಸ್ತಾನ, ಫಿಲಿಪೈನ್ಸ್, ಇಥಿಯೋಪಿಯಾ, ಘಾನಾ, ನೈಜೀರಿಯಾ, ತಾಂಜಾನಿಯಾ, ವಿಯೆಟ್ನಾಂನಂತಹ ದೇಶಗಳಲ್ಲಿ ಕಡಿಮೆ ರೇಟಿಂಗ್ ಹೊಂದಿರುವ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.
ಹೆಲ್ತ್ ಸ್ಟಾರ್ ರೇಟಿಂಗ್ ವ್ಯವಸ್ಥೆಯಲ್ಲಿ ಉತ್ಪನ್ನಗಳನ್ನು 5 ರೇಟಿಂಗ್ ನಲ್ಲಿ ಅಳೆಯಲಾಗುತ್ತದೆ. 3.5ಕ್ಕಿಂತ ಹೆಚ್ಚು ರೇಟಿಂಗ್ ಪಡೆದರೆ ಅದನ್ನು ಆರೋಗ್ಯಕರ ಆಹಾರ ಎನ್ನಲಾಗುತ್ತಿದೆ. ಆದರೆ, ಬಡ ರಾಷ್ಟ್ರಗಳಲ್ಲಿ ಮಾರಾಟವಾಗುತ್ತಿರುವ ಆಹಾರ ಉತ್ಪನ್ನಗಳ ಸರಾಸರಿ ರೇಟಿಂಗ್ 1.8 ಆಗಿದೆ.