ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಆದರೆ, ಈ ಪೈಕಿ ಚನ್ನಪಟ್ಟಣ ಕ್ಷೇತ್ರ ಮಾತ್ರ ಹೈ ವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ. ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಸಿಎಂ, ಡಿಸಿಎಂ ಸೇರಿದಂತೆ ಸಚಿವರು, ಶಾಸಕರು ಪ್ರಚಾರ ನಡೆಸುತ್ತಿದ್ದರೆ, ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವಿಗೆ ಮೈತ್ರಿ ಬಣ, ಬಿಜೆಪಿ ನಾಯಕರು, ಮಾಜಿ ಪ್ರಧಾನಿ ದೇವೇಗೌಡ, ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ಕ್ಷೇತ್ರವು ಜಿದ್ದಾಜಿದ್ದಿನ ಕಣವಾಗಿದೆ.
ಈ ಮಧ್ಯೆ ಪತಿಯ ಗೆಲುವಿಗಾಗಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರ ಪತ್ನಿ ಶೀಲಾ ದೇವರ ಮೊರೆ ಹೋಗಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿನ ಹೊಳೆ ಆಂಜನೇಯಸ್ವಾಮಿ ದೇಗುಲದಲ್ಲಿ ಸಿ.ಪಿ. ಯೋಗೇಶ್ವರ್ ಅವರ ಪತ್ನಿ ಶೀಲಾ ಅವರು ಪತಿಯ ಗೆಲುವಿಗಾಗಿ ವಿಶೇಷ ಪೂಜೆ ನಡೆಸಿದ್ದಾರೆ. ಶ್ರೀಪಾದ್ ಆಚಾರ್ಯರವರ ನೇತೃತ್ವದಲ್ಲಿ ಹೋಮ ನಡೆದಿದೆ.
ದೇವಸ್ಥಾನದಲ್ಲಿ ವಾಯುಸ್ಥಿತಿ ಪುನಃ ಚರಣ ವಿಶೇಷ ಹೋಮ ನಡೆಸಲಾಗಿದೆ. ಸಿ.ಪಿ. ಯೋಗೇಶ್ವರ್ ಇತ್ತಿಚೆಗಷ್ಟೆ ಹೊಳೆ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಹರಕೆ ಕಟ್ಟಿಕೊಂಡು ವಿಶೇಷ ಪೂಜೆ ಸಲ್ಲಿಸಿ ಹೋಗಿದ್ದರು. ಸದ್ಯ ಪತಿಯ ಗೆಲುವಿಗಾಗಿ ಪತ್ನಿ ಶೀಲಾ ವಿಶೇಷ ಹೋಮ ಮಾಡಿಸಿದ್ದಾರೆ. ವಿಶೇಷ ಹೋಮದ ಮೂಲಕ ಪತಿಯ ಗೆಲುವಿಗಾಗಿ ದೇವರಲ್ಲಿ ಪ್ರಾರ್ಥಿಸಿದ್ದಾರೆ.