ಚನ್ನಪಟ್ಟಣ: ನಾನು ತಾಲೂಕಿನ ಅಭಿವೃದ್ಧಿಗಾಗಿ ಹೋರಾಡುತ್ತಿದ್ದರೆ, ಜೆಡಿಎಸ್ ಮಾತ್ರ ಕುಟುಂಬದ ಕುಡಿಯ ಪಟ್ಟಾಭಿಷೇಕಕ್ಕಾಗಿ ಹೋರಾಟ ಮಾಡುತ್ತಿದೆ. ಇದರಲ್ಲಿ ಯಾರು ಹಿತವರು ಎಂದು ಯೋಚಿಸಿ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಮನವಿ ಮಾಡಿದ್ದಾರೆ.
ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ತಿಗಳ ಸಮುದಾಯ ಸಭೆಯಲ್ಲಿ ಮಾತನಾಡಿದ ಯೋಗೇಶ್ವರ್, ಪ್ರತಿ ಬಾರಿಯೂ ಈ ಸಮುದಾಯದ ಜನ ನಮ್ಮನ್ನು ಕೈ ಹಿಡಿದಿದ್ದಾರೆ. ಈ ಬಾರಿಯೂ ನನಗೆ ಆಶೀರ್ವದಿಸಿದರೆ ಜಯ ಸಿಗಲಿದೆ. ಉಪ ಚುನಾವಣೆ ನನ್ನ ರಾಜಕೀಯ ಜೀವನದ ಪ್ರಮುಖ ಘಟ್ಟ. ಈ ರಾಜಕೀಯ ದೈತ್ಯರು ಎರಡು ಬಾರಿ ನನ್ನ ಮೇಲೆ ನುಗ್ಗಿ ಬಂದು ಸೋಲಿಸಿ ಮೂರನೇ ಬಾರಿಗೆ ವಂಶದ ಕುಡಿ ಕರೆ ತಂದಿದ್ದಾರೆ. ಇದನ್ನು ಯೋಚಿಸಿ ಮತದಾರರು ಮತ ಹಾಕಬೇಕು ಎಂದು ಮನವಿ ಮಾಡಿದ್ದಾರೆ.
ಕುಮಾರಸ್ವಾಮಿ ಎರಡು ಬಾರಿ ಈ ಕ್ಷೇತ್ರದ ಶಾಸಕರಾಗಿದ್ದರು. ಜೊತೆಗೆ ಸಿಎಂ ಹುದ್ದೆ ಸಹ ಅಲಂಕರಿಸಿದವರು. ಆದರೂ ಕ್ಷೇತ್ರ ಅಭಿವೃದ್ಧಿಯಾಗಿಲ್ಲ. ಕೇವಲ ಚುನಾವಣೆಗಳು ಬಂದಾಗ ಮಾತ್ರ ನಿಮ್ಮೂರುಗಳಿಗೆ ಬರುವ ಇವರನ್ನು ನಂಬದೆ ಸದಾ ನಿಮ್ಮ ಜೊತೆ ಇರುವ ನನಗೆ ಈ ಬಾರಿ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.