ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕೊರೊನಾ ಹಗರಣ ತನಿಖೆಗೆ ಸಂಬಂಧಿಸಿದಂತೆ ಬಿ.ವೈ. ವಿಜಯೇಂದ್ರ ಮಾತನಾಡಿದ್ದಾರೆ.
ನಾವು ತನಿಖೆ ಸೇರಿದಂತೆ ಯಾವುದೇ ಧಮ್ಕಿಗೆ ಹೆದರುವುದಿಲ್ಲ. ನಮ್ಮ ವಿರುದ್ಧ ನೂರು ಷಡ್ಯಂತ್ರ ಮಾಡಿದರೂ ನಾವು ಅಂಜುವುದಿಲ್ಲ. ಉಪ ಚುನಾವಣೆಯ ಸೋಲಿನ ಭಯದಿಂದ ಕಾಂಗ್ರೆಸ್ ಈ ರೀತಿ ಮಾಡುತ್ತಿದೆ. ಆದರೆ, ಅದರ ಭಂಡತನಕ್ಕೆ ನಾವು ಹೆದರುವುದಿಲ್ಲ. ಕಾಂಗ್ರೆಸ್ ನ ಆರೋಪವನ್ನು ನಾವು ಎದರಿಸುತ್ತೇವೆ. ಎಲ್ಲದಕ್ಕೂ ಉತ್ತರ ನೀಡುತ್ತೇವೆ. ಎಲ್ಲವೂ ರಾಜ್ಯದ ಜನರಿಗೆ ಗೊತ್ತಿದೆ ಎಂದು ಹೇಳಿದ್ದಾರೆ.
ಮುಡಾ ಹಗರಣಲ್ಲಿ ಸಿಎಂ ಸಿದ್ದರಾಮಯ್ಯನವರು ಬಹಳ ಧೈರ್ಯವಾಗಿ ಲೋಕಾಯುಕ್ತ ವಿಚಾರಣೆಯನ್ನು ಎದುರಿಸಿದರು. ಕಾರಣ ಮುಖ್ಯಮಂತ್ರಿಗಳಿಗೆ ಬೇಕಾದವರು ಲೋಕಾಯುಕ್ತದಲ್ಲಿದ್ದಾರೆ. ಸಿಎಂ ತಾವು ಸೇರಿದಂತೆ ತಮ್ಮ ಸರ್ಕಾರದಲ್ಲಿದ್ದವರನ್ನು ಉಳಿಸಲು ನಿಸ್ಸೀಮರು. ಯಾವಾಗ ಬೇಕೋ ಅವಾಗ ಆಯೋಗ ರಚಿಸುತ್ತಾರೆ. ಎದುರಾಳಿಗಳಿಗೆ ರಾಜಕೀಯವಾಗಿ ಮುಗಿಸಲು ಕುತಂತ್ರ ಮಾಡಲು ಯಾವ ರೀತಿ ಆಯೋಗ ರಚನೆ ಮಾಡಬೇಕು, ಯಾರನ್ನು ಹಿಡಿದು ಕೆಲಸ ಮಾಡಿಸಬೇಕು ಎಂಬುವುದು ಅವರಿಗೆ ಗೊತ್ತಿದೆ ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿಯಾಗಲಿ, ಯಡಿಯೂರಪ್ಪನವರಾಗಲಿ ಈ ರೀತಿ ತನಿಖಾ ವರದಿಗಳಿಂದ ಎದುರು ಓಡಿ ಹೋಗುವ ಪ್ರಶ್ನೆಯಿಲ್ಲ. ಹಿಂದೆ ಅನೇಕ ಬಾರಿ ಯಡಿಯೂರಪ್ಪ ವಿರುದ್ಧ ಷಡ್ಯಂತ್ರಗಳು ನಡೆದಿವೆ. ರಾಜ್ಯ ರಾಜಕಾರಣದಲ್ಲಿ ಯಡಿಯೂರಪ್ಪನವರ ವಿರುದ್ಧ ನಡೆದಷ್ಟು ರಾಜಕೀಯ ಕುತಂತ್ರಗಳು ಇನ್ಯಾವುದೇ ರಾಜಕಾರಣಿ ಮೇಲೆ ನಡೆದಿರಲು ಸಾಧ್ಯವಿಲ್ಲ. ನಾವು ಇವುಗಳನ್ನು ಎದುರಿಸುತ್ತೇವೆ ಎಂದಿದ್ದಾರೆ.