ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ 97ನೇ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.
ಈ ವೇಳೆ ಪ್ರಧಾನಿ ಮೋದಿ, ದೇಶದ ರಾಜಕೀಯಕ್ಕೆ ಅಡ್ವಾಣಿ ಅವರ ಕೊಡುಗೆ ಅಪಾರವಾಗಿದೆ. ಅವರು ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಹೊಂದುವಂತಾಗಲಿ ಎಂದು ಹಾರೈಸಿದ್ದಾರೆ.
ದಶಕಗಳ ಕಾಲ ಭಾರತದ ರಾಜಕೀಯದ ಮೂಲಾಧಾರವಾಗಿರುವ ಅಡ್ವಾಣಿ ಅವರನ್ನು ಪ್ರಧಾನಿಯವರು ಹೃತ್ಪೂರ್ವಕವಾಗಿ ಹಾರೈಸಿದರು. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ, ಅಡ್ವಾಣಿ ಅವರು ಭಾರತದ ಅತ್ಯಂತ ಗೌರವಾನ್ವಿತ ರಾಜಕಾರಣಿಗಳಲ್ಲಿ ಒಬ್ಬರು. ರಾಷ್ಟ್ರದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅವರ ಸಮರ್ಪಣೆಯ ಬಗ್ಗೆ ಗೌರವ ಸೂಚಿಸಿದ್ದಾರೆ. “ಅವರ ಜನ್ಮದಿನದ ಸಂದರ್ಭದಲ್ಲಿ, ನಾನು ಎಲ್.ಕೆ. ಅಡ್ವಾಣಿ ಜಿ ಅವರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಈ ವರ್ಷ ಬಹಳ ವಿಶೇಷವಾಗಿದೆ. ಏಕೆಂದರೆ ಅವರಿಗೆ ಭಾರತ ರತ್ನವನ್ನು ನೀಡಲಾಯಿತು” ಎಂದು ಹೇಳಿದ್ದಾರೆ.
2002ರಿಂದ 2004ರ ವರೆಗೆ ಎಲ್.ಕೆ. ಅಡ್ವಾಣಿ ಅವರು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಉಪ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಅಡ್ವಾಣಿ ಅವರು 1986-1990, 1993-1998, ಮತ್ತು 2004-2005ರ ನಡುವೆ ಮೂರು ಅವಧಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 1999ರಿಂದ 2004ರ ವರೆಗೆ ದೇಶದ ಗೃಹ ಸಚಿವರಾಗಿದ್ದರು.