ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಧ್ಯೆ ವಾಕ್ಸಮರ ಜೋರಾಗಿ ನಡೆಯುತ್ತಿದೆ. ಈ ವೇಳೆ ಡಿಕೆಶಿ ಕಾಲೇಳೆದ ಕುಮಾರಸ್ವಾಮಿ, ಡಿಕೆಶಿಯಂತೆ ನಾನು ಲೂಟಿ ಮಾಡಿದ್ದರೆ, ಪ್ರತಿ ತಾಲೂಕಿಗೆ 10 ಎಕರೆ ಜಾಗ ನೀಡುತ್ತಿದ್ದೆ ಎಂದು ವಾಗ್ದಳಿ ನಡೆಸಿದ್ದಾರೆ.
ಇತ್ತೀಚೆಗೆ ಡಿಕೆ ಶಿವಕುಮಾರ್ ನಾನು ನನ್ನ ತಾಲೂಕಿನಲ್ಲಿರುವ ಶಾಲೆಗಳಿಗೆ 25 ಎಕರೆ ಭೂಮಿ ನೀಡಿದ್ದೇನೆ. ಕುಮಾರಸ್ವಾಮಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ನಾನು ಡಿಕೆಶಿಯಂತೆ ಲೂಟಿ ಮಾಡಿಲ್ಲ. ಹಾಗೆ ಲೂಟಿ ಮಾಡಿದ್ದರೆ, ಅದೇ ರೀತಿ ಕೊಡುತ್ತಿದ್ದೆ ಎಂದು ವ್ಯಂಗ್ಯವಾಡಿದ್ದಾರೆ.
ಅವರಂತೆ ಲೂಟಿ ಮಾಡಿದ್ದರೆ, ಕೇವಲ ಒಂದು ತಾಲೂಕಿಗೆ ಮಾತ್ರವಲ್ಲ, ಇಡೀ ರಾಜ್ಯದ ಪ್ರತಿಯೊಂದು ತಾಲೂಕಿಗೂ ನೀಡುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಇರುವವರು ಯಾರಿಗೂ ಜಾಗ ನೀಡಿಲ್ಲ. ಬೇರೆಯವರ ಜಾಗವನ್ನೇ ಇವರು ನುಂಗುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಚನ್ನಪಟ್ಟಣ ಚುನಾವಣೆಯ ಕಾವು ರಂಗೇರಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಗೆಲ್ಲಿಸಲು ಡಿಕೆ ಬ್ರದರ್ಸ್ ಪಣ ತೊಟ್ಟಿದ್ದರೆ, ಮಗನನ್ನು ಗೆಲ್ಲಿಸಲು ಕುಮಾರಸ್ವಾಮಿ ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಆರೋಪ- ಪ್ರತ್ಯಾರೋಪಗಳು ಹೆಚ್ಚಾಗುತ್ತಿವೆ. ಆದರೆ, ಮತದಾರ ಮಾತ್ರ ಯಾರಿಗೆ ಜೈ ಎನ್ನುತ್ತಾನೆ ಎನ್ನುವುದನ್ನು ಕಾಯ್ದು ನೋಡಬೇಕಿದೆ.