ಹಾವೇರಿ: ರಾಜ್ಯದ ಮೂರು ಕ್ಷೇತ್ರಗಳಲ್ಲಿ ಚುನಾವಣಾ ಕಾವು ರಂಗೇರಿದೆ. ಈ ಮಧ್ಯೆ ಶಿಗ್ಗಾಂವಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಪೈಪೋಟಿ ನಡೆಯುತ್ತಿದೆ. ಅಬ್ಬರದ ಪ್ರಚಾರದ ಮಧ್ಯೆ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ತಮ್ಮ ಕನಸಿನ ಬಗ್ಗೆ ಹೇಳಿದ್ದಾರೆ.
ಶಿಗ್ಗಾಂವಿ ಕ್ಷೇತ್ರದ ಯುವ ಜನತೆಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಇಂಜಿನಿಯರಿಂಗ್ ಕಾಲೇಜು ತೆರೆಯುವ ಗುರಿಯಿದೆ ಎಂದಿದ್ದಾರೆ. ನಾನು ಹಳ್ಳಿ ಹಾಗೂ ಯುವಕರ ಪರ ಕೆಲಸ ಮಾಡುತ್ತೇನೆ. ನಮ್ಮ ತಂದೆ ಈ ಭಾಗದಲ್ಲಿದ್ದ ನೀರಿನ ಸಮಸ್ಯೆ ಬಗೆ ಹರಿಸಿದ್ದಾರೆ. ರಸ್ತೆಗಳು ಸಾಕಷ್ಟು ಅಭಿವೃದ್ಧಿ ಹೊಂದಿವೆ. ಇದನ್ನೆಲ್ಲ ಗಮನಿಸಿ ಈ ಬಾರಿಯೂ ಮತದಾರ ಬಿಜೆಪಿಗೆ ಜೈ ಎನ್ನುತ್ತಾನೆ ಎಂದಿದ್ದಾರೆ.
ನಮ್ಮ ತಂದೆ ಕ್ಷೇತ್ರದಲ್ಲಿ ಹದಿನೈದು ಸಾವಿರ ಮನೆ ಕಟ್ಟಿದ್ದಾರೆ. ಯುವಕರ ಪರವಾಗಿ, ಶಾಲೆ, ಕಾಲೇಜು, ಜಿಟಿಟಿಸಿ, ಐಟಿಐ ಕಾಲೇಜು ಸ್ಥಾಪಿಸಿದ್ದಾರೆ. ಅಂಬುಜಾ ಕಂಪನಿ, ಶಾಹಿ ಸಂಸ್ಥೆ ಬಂದಿದೆ. ಗಾರ್ಮೆಂಟ್ನಲ್ಲಿ ಹತ್ತು ಸಾವಿರ ಹೆಣ್ಣು ಮಕ್ಕಳು ಕೆಲಸ ಮಾಡುತ್ತಿದ್ದಾರೆ. ಶಿಗ್ಗಾವಿಯಲ್ಲಿ 250 ಬೆಡ್ನ ಆಸ್ಪತ್ರೆ ಆರಂಭವಾಗುತ್ತಿದೆ. ಕನಕದಾಸರ ಬಾಡ ಅಭಿವೃದ್ಧಿಯಾಗಿದೆ. ಶಿಶುನಾಳ ಶರೀಫರ ಊರು ಅಭಿವೃದ್ಧಿಯಾಗಿದೆ. ನಾನು ಕೂಡ ನಮ್ಮ ತಂದೆ ಹಾಕಿಕೊಟ್ಟ ದಾರಿಯಲ್ಲೇ ನಡೆಯುತ್ತೇನೆ. ಅವರಂತೆ ಜನರ ಸೇವೆ ಮಾಡುತ್ತೇನೆ ಎಂದಿದ್ದಾರೆ.