ನಟ ಪ್ರಭಾಸ್ ದೊಡ್ಡ ಸ್ಟಾರ್ ನಟರಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಹಲವಾರು ಚಿತ್ರ ನಿರ್ಮಾಣ ಸಂಸ್ಥೆಗಳು ಅವರ ಕಾಲ್ ಶೀಟ್ ಗಾಗಿ ಕಾಯುತ್ತಿವೆ. ಈ ಮಧ್ಯೆ ಕನ್ನಡದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ, ಪ್ರಭಾಸ್ ಜೊತೆಗೆ ದೀರ್ಘ ಕಾಲದ ಒಪ್ಪಂದ ಮಾಡಿಕೊಂಡಿದೆ.
ಹೊಂಬಾಳೆ ಸಂಸ್ಥೆಯು ಮುಂದಿನ ಮೂರು ವರ್ಷಗಳಲ್ಲಿ ಪ್ರಭಾಸ್ ಜೊತೆಗೆ ಮೂರು ಸಿನಿಮಾ ನಿರ್ಮಾಣ ಮಾಡುವ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ. ಅಂದರೆ 2026, 2027 ಹಾಗೂ 2028 ಕ್ಕೆ ತಲಾ ಒಂದೊಂದು ಸಿನಿಮಾಗಳನ್ನು ಹೊಂಬಾಳೆ ನಿರ್ಮಾಣ ಮಾಡಲಿದೆ. ಅಥವಾ ಬಿಡುಗಡೆ ಮಾಡಲಿದೆ. ಇದೇ ಮೊದಲ ಬಾರಿಗೆ ನಟ ಪ್ರಭಾಸ್ ನಿರ್ಮಾಣ ಸಂಸ್ಥೆಯೊಂದರ ಜೊತೆಗೆ ಸಿನಿಮಾ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಹೊಂಬಾಳೆ ಫಿಲ್ಮ್ಸ್, ‘ರೆಬಲ್ ಸ್ಟಾರ್ ಜೊತೆಗೆ ಕೈಜೋಡಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ. ಭಾರತೀಯ ಸಿನಿಮಾದ ಸಾರವನ್ನು ಸಂಭ್ರಮಿಸುವ ಹಾಗೂ ಅದನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗಲು ಈ ಕೈಜೋಡಿಸುವಿಕೆ ಅತ್ಯಂತ ಮಹತ್ವ ಪಡೆದಿದೆ. ಸಿನಿಮಾ ಪ್ರೇಮಿಗಳಿಗೆ ಮರೆಯಲಾಗದ ಸಿನಿಮಾ ಅನುಭವವನ್ನು ಕೊಡುವುದು ನಮ್ಮ ಘೋಷಣೆಯಾಗಿದೆ. ವೇದಿಕೆ ಸಜ್ಜಾಗಿದೆ, ಮುಂದಿನ ಹಾದಿ ಮಿತಿಯಿಲ್ಲದ್ದಾಗಿದೆ. ‘ಸಲಾರ್ 2’ ಸಿನಿಮಾದ ಜೊತೆಗೆ ನಮ್ಮ ಈ ಪಯಣ ಪ್ರಾರಂಭ ಆಗಲಿದೆ ಎಂದು ಹೇಳಿದೆ.
ಈಗಾಗಲೇ ಪ್ರಭಾಸ್, ‘ರಾಜಾ ಸಾಬ್’ ಹೆಸರಿನ ಹಾರರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆನಂತರ ಸ್ಪಿರಿಟ್ ನಲ್ಲಿ ನಟಿಸಲಿದ್ದಾರೆ. ಇದಾದ ಬಳಿಕ ಸಲಾರ್ 2 ಚಿತ್ರೀಕರಣ ಆರಂಭವಾಗಲಿದೆ ಎನ್ನಲಾಗುತ್ತಿದೆ.