ಬೆಳಗಾವಿ: ಜಿಲ್ಲೆಯ ತಹಸೀಲ್ದಾರ್ ಕಚೇರಿಯಲ್ಲಿ ಅಧಿಕಾರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಬಿಜೆಪಿ ನಾಯಕರು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆರೋಪಿಸಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ಪಿಎಗಳನ್ನು ಬಿಟ್ಟು ಅಧಿಕಾರಿಗಳಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ನೀಡುವಂತೆ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಮೂವರ ವಿರುದ್ಧ ಇಲ್ಲಿನ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಸಾವನ್ನಪ್ಪಿರುವ ಅಧಿಕಾರಿ ಡೆತ್ ನೋಟ್ ಬರೆದಿಟ್ಟಿದ್ದು, ಗ್ರೂಪ್ ನಲ್ಲಿ ವಾಟ್ಸಾಪ್ ಸಂದೇಶ ಹಾಕಿ ತಡರಾತ್ರಿ ಅಧಿಕಾರಿ ರುದ್ರಣ್ಣ ಸಾವಿಗೆ ಶರಣಾಗಿದ್ದರು. ಡೆತ್‌ನೋಟ್ ವಶಕ್ಕೆ ಪಡೆದಿದ್ದ ಪೊಲೀಸರಿಗೆ ಮೃತ ಅಧಿಕಾರಿಯ ಮೊಬೈಲ್ ಫೋನ್ ಸಿಕ್ಕಿರಲಿಲ್ಲ. ಸದ್ಯ ತನಿಖೆಯ ಜವಾಬ್ದಾರಿಯನ್ನು ಎಸಿಪಿಗೆ ವಹಿಸಲಾಗಿದೆ. ಹೀಗಾಗಿ ತನಿಖೆ ಚುರುಕುಗೊಂಡಿದೆ.
ಹೀಗಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಅವರ ಆಪ್ತ ಸೋಮುಗೆ ಸಂಕಷ್ಟ ಎದುರಾಗುತ್ತಿದೆ. ಆರೋಪಿಗಳನ್ನು ಬಂಧಿಸುವಲ್ಲಿ ನಿರತರಾದ ಪೊಲೀಸರು ತಂಡಗಳನ್ನು ರಚನೆ ಮಾಡಿದ್ದಾರೆ ಎನ್ನಲಾಗಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪಿಎ ಬಿಟ್ಟು ನೀಡುತ್ತಿರುವ ಕಿರುಕುಳ ಸಹಿಸಲಾಗದೇ ಅಧಿಕಾರಿಯು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ ಹೆಚ್ಚಾಗಿದೆ. ಅವರಿಂದಲೇ ಅಮಾಯಕ ಅಧಿಕಾರಿಯೊಬ್ಬರು ಸಾವಾಗಿದೆ. ಪೊಲೀಸರು ಎಫ್‌ಐಆರ್ ಆದರೂ ಇಲ್ಲಿಯವರೆಗೆ ಬಂಧಿಸಿಲ್ಲ ಎಂದು ವಿರೋಧಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಆರೋಪಿಸಿದ್ದಾರೆ.
ಕಚೇರಿಯಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದ್ದ ಮೃತ ಅಧಿಕಾರಿ ರುದ್ರಣ್ಣ ಅವರು ಕಿರುಕುಳ ಅನುಭವಿಸಿದ್ದರು ಎನ್ನಲಾಗಿದೆ. ಸಿಬ್ಬಂದಿಯ ಡೆತ್ ನೋಟ್ ನಲ್ಲಿ ಕಚೇರಿ ಅನ್ಯಾಯ ಸರಿ ಮಾಡಬೇಕು ಎಂದು ಮೂವರ ಹೆಸರನ್ನು ಉಲ್ಲೇಖಿಸಿದ್ದರು.