ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್ ಗಳ ವ್ಯಾಪ್ತಿಯಲ್ಲಿನ ಮುಖ್ಯ ರಸ್ತೆಗಳು ಮತ್ತು ವಾರ್ಡ್ ರಸ್ತೆಗಳ ಅಭಿವೃದ್ಧಿ ಕಾರ್ಯಗಳಿಗಾಗಿ 2013-14 ರಿಂದ 2023-24 ರವರೆಗಿನ 10 ವರ್ಷಗಳ ಅವಧಿಯಲ್ಲಿ ವಿವಿಧ ಅನುದಾನಗಳ ಮೂಲಕ ಒಟ್ಟು 46,292.23 ಕೋಟಿ ರೂ. ಬಿಡುಗಡೆಯಾಗಿದ್ದು, ದುರ್ಬಳಕೆಯಾಗಿದೆ ಎದು ಭ್ರಷ್ಟಾಚಾರ ವಿರೋಧಿ ವೇದಿಕೆಯ ಅಧ್ಯಕ್ಷ ರಮೇಶ್ ಎನ್.ಆರ್. ಆರೋಪಿಸಿದ್ದಾರೆ.

ಬೆಂಗಳೂರಿನ ಮೇಲ್ಸೇತುವೆಗಳು, ಕೆಳ ಸೇತುವೆಗಳು ಮತ್ತು White Topping ರಸ್ತೆಗಳನ್ನು ಹೊರತುಪಡಿಸಿ ಕೇವಲ ರಸ್ತೆಗಳ ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿಯೇ ಇಷ್ಟೊಂದು ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. “ರಸ್ತೆಗಳ ಮೂಲಭೂತ ಸೌಕರ್ಯ ಇಲಾಖೆ” ಮತ್ತು “ವಿಭಾಗ”ಗಳ ಮೂಲಕ ರಸ್ತೆಗಳ ಅಭಿವೃದ್ಧಿ ಕಾರ್ಯಗಳು ನಡೆದಿದ್ದರೂ ಪ್ರತಿ ವರ್ಷ ಕನಿಷ್ಠ 25 ಸಾವಿರ ಕ್ಕೂ ಅಧಿಕ ರಸ್ತೆ ಗುಂಡಿಗಳು ಸೃಷ್ಟಿಯಾಗುತ್ತಿವೆ. ಪಾಲಿಕೆ ವ್ಯಾಪ್ಯಿಯಲ್ಲಿರುವ 1,980 ಕಿ. ಮೀ. ಉದ್ದದ Arterial, Sub-Arterial ಮತ್ತು ಮುಖ್ಯ ರಸ್ತೆಗಳಲ್ಲಿ ಖುದ್ದಾಗಿ ಪರಿಶೀಲಿಸಿದ ಸಂದರ್ಭದಲ್ಲಿ ಸುಮಾರು 30,000 ಕ್ಕೂ ಅಧಿಕ ರಸ್ತೆ ಗುಂಡಿಗಳನ್ನು ಪತ್ತೆ ಹಚ್ಚಲಾಗಿದೆ.

ಇದನ್ನು ಗಮನಿಸಿದರೆ ಬೃಹತ್ ಪ್ರಮಾಣದ ಅನುದಾನವನ್ನು ನಿಜಕ್ಕೂ ಸದ್ಭಳಕೆ ಮಾಡಿದ್ದೇ ಆದಲ್ಲಿ, ಪಾಲಿಕೆ ವ್ಯಾಪ್ತಿಯಲ್ಲಿರುವ 1,980 ಕಿ. ಮೀ. ಉದ್ದದ ಬೃಹತ್ ರಸ್ತೆಗಳ ಪಾದಚಾರಿ ಮಾರ್ಗಗಳಿಗೆ “ಚಿನ್ನದ ತಗಡು”ಗಳನ್ನೇ ಅಳವಡಿಸಬಹುದಾಗಿತ್ತು. ಇಷ್ಟೊಂದು ಅನುದಾನ ಬಿಡುಗಡೆಯಾಗಿದ್ದರೂ 10 ವರ್ಷಗಳಿಂದ ದೇಶದ ಬೇರ್ಯಾವುದೇ ನಗರ ಪ್ರದೇಶಗಳಿಗಿಂತಲೂ ಅತಿ ಹೆಚ್ಚು ಕಳಪೆ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿರುವುದು ಮತ್ತು ನಿರಂತರವಾಗಿ 198 ವಾರ್ಡ್ ಗಳ ವ್ಯಾಪ್ತಿಯ ರಸ್ತೆಗಳು ಮತ್ತು ಮುಖ್ಯರಸ್ತೆಗಳಲ್ಲಿ ಹತ್ತಾರು ಸಾವಿರ ರಸ್ತೆಗುಂಡಿಗಳು ಒಂದರ ಹಿಂದೆ ಒಂದರಂತೆ ಸೃಷ್ಟಿಯಾಗುತ್ತಿರುವುದು ಬಿಬಿಎಂಪಿ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿ ಎಂದು ಆರೋಪಿಸಿದ್ದಾರೆ.