ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ)ಯ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಅವರು ತಮ್ಮ ಪದಾಧಿಕಾರಿಗಳೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ನಗರದ ವಿವಿಧೆಡೆ ಧ್ವಜಾರೋಹಣ ನೆರವೇರಿಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ಹಾಗೂ ಅಲ್ಟಿಮಾ ಅಪಾರ್ಟ್ ಮೆಂಟ್ ಸೇರಿದಂತೆ ಹಲವೆಡೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಈ ವೇಳೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕೇವಲ ಹೆಸರಿಗೆ ಮಾತ್ರ ಕನ್ನಡ ಆಡಳಿತ ಭಾಷೆಯಾಗಬಾರದು. ಅದು ಜೀವ ಭಾಷೆಯಾಗಬೇಕು. ಪ್ರತಿಯೊಬ್ಬರ ಮನೆ-ಮನಗಳಲ್ಲೂ ಕನ್ನಡ ರಾರಾಜಿಸಬೇಕು. ಐಟಿ-ಬಿಟಿ ಸೇರಿದಂತೆ ಕೆಲಸ ಅರಸಿ ಕರುನಾಡ ನೆಲ ನೆಚ್ಚಿ ಬರುವ ಪ್ರತಿಯೊಬ್ಬರೂ ಕನ್ನಡ ಕಲಿತು, ಕನ್ನಡದಲ್ಲೇ ವ್ಯವಹರಿಸಬೇಕು ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಅನ್ನಸಂತರ್ಪಣೆ ಕೈಗೊಳ್ಳಲಾಯಿತು. ಅಲ್ಲದೇ, ಪ್ರತಿಭಾವಂತ ವಿದ್ಯಾರ್ಥಿಗಳು, ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಾಗೂ ಶಿಕ್ಷಣದ ಪರಿಕರಗಳನ್ನು ವಿತರಿಸಲಾಯಿತು. ಈ ವೇಳೆ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಉಪಾಧ್ಯಕ್ಷ ಶಿವರಾಜ್ ಗೌಡ, ಬೆಂಗಳೂರು ನಗರಾಧ್ಯಕ್ಷ ಶಿವಾನಂದ ಶೆಟ್ಟಿ ಸೇರಿದಂತೆ ಹಲವರು ಇದ್ದರು.
