ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲು ಪ್ರಯತ್ನಿಸಿದರೆ ದೊಡ್ಡ ಕ್ರಾಂತಿಯಾಗುತ್ತದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ಸಮಿತಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಇದು ಸಿದ್ದರಾಮಯ್ಯ ಅವರ ವಿಷಯದ ಮಾತಲ್ಲ. ಈ ರೀತಿ ಮಾಡಿದರೆ ಪ್ರಜಾಪ್ರಭುತ್ವಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ಹೀಗಾಗಿ ಎಲ್ಲ ಪಕ್ಷದವರು ಈ ಕುರಿತು ಚಿಂತನೆ ನಡೆಸಬೇಕು ಎಂದಿದ್ದಾರೆ.
ಸ್ನೇಹ ಇದೆ ಅಂತಾ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಹೊಗಳುತ್ತಿಲ್ಲ. 40 ವರ್ಷದ ರಾಜಕಾರಣದಲ್ಲಿ ಸಿದ್ದರಾಮಯ್ಯಗೆ ಏನೂ ಸಿಕ್ಕಿಲ್ಲ. ಯಾರೇ ಬೀದಿಯಲ್ಲಿ ಹೋಗುವವರಿಬ್ಬರು ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ. ವಿರೋಧ ಪಕ್ಷದವರು ಎತ್ತಿಕಟ್ಟಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿಸಿದ್ದಾರೆ. ಸಿಎಂಗೆ ನೋಟಿಸ್ ಕೊಟ್ಟಿದ ದಿನವೇ ರಾಜ್ಯಪಾಲರ ವಿರುದ್ಧ ಮೊದಲು ಪ್ರತಿಭಟನೆ ಮಾಡಿದ್ದೇನೆ ಎಂದು ಗುಡುಗಿದ್ದಾರೆ.
ಜೆಡಿಎಸ್‌ನಿಂದ ಸಿದ್ದರಾಮಯ್ಯರನ್ನು ತೆಗೆದಾಗ ನಾನೇ ಪ್ರತಿಭಟನೆ ಮಾಡಿದ್ದೆ. ಎಂದೂ ಯಾವುದೇ ಬಂದ್ ಮಾಡಬೇಡಿ ಎಂದು ಸಿದ್ದರಾಮಯ್ಯ ಹೇಳಲಿಲ್ಲ. ಬಂದ್ ಮಾಡಲಿಬಿಡಿ ಎಂದು ಪೊಲೀಸರಿಗೆ ಹೇಳಿದ್ದರು. ಕನ್ನಡದ ಮೇಲೆ ಸಿಎಂ ಸಿದ್ದರಾಮಯ್ಯಗೆ ಅಪಾರ ಗೌರವವಿದೆ ಎಂದಿದ್ದಾರೆ.