ದೇಶದಲ್ಲಿ ಕರ್ನಾಟಕದಲ್ಲೇ ಸಿನಿಮಾ ಟಿಕೆಟ್ ದರ ಹೆಚ್ಚಾಗಿತ್ತು. ಟಿಕೆಟ್ ದರ ನಿಗದಿಗೆ ಯಾವುದೇ ಮಾನದಂಡಗಳಿಲ್ಲ. ಕೆಲವು ಪರಭಾಷೆ ಸಿನಿಮಾಗಳ ಟಿಕೆಟ್ ದರ ರಾಜ್ಯದಲ್ಲಿ 1500 ರಿಂದ 2 ಸಾವಿರದವರೆಗೆ ಮಾರಾಟವಾಗುತ್ತವೆ. ಆದರೆ, ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಯಾವುದೇ ಚಿತ್ರಮಂದಿರ, ಯಾವುದೇ ಸಿನಿಮಾ ಆದರೂ 200 ರೂ. ದಾಟುವಂತಿಲ್ಲ. ಹೀಗಾಗಿ ರಾಜ್ಯದಲ್ಲಿ ಸಿನಿಮಾ ಟಿಕೆಟ್ ರಾಜ್ಯದಲ್ಲಿಯೂ ಸಿನಿಮಾ ಟಿಕೆಟ್ ದರವನ್ನು ನಿಯಂತ್ರಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ.
ಹೀಗಾಗಿ ದರ ನಿಗದಿಗೆ ಚಲನಚಿತ್ರ ವಾಣಿಜ್ಯ ಮಂಡಳಿ ಸರ್ಕಾರವನ್ನು ಒತ್ತಾಯಿಸಿದ್ದು, ಹತ್ತು ದಿನಗಳಲ್ಲಿ ಈ ಕುರಿತು ಆದೇಶ ಹೊರಡಿಸುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸುರೇಶ್, ಹಿಂದೆ 2017 ರಲ್ಲಿ ಸಾರಾ ಗೋವಿಂದು ಅವರು ಅಧ್ಯಕ್ಷರಾಗಿದ್ದಾಗ, ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ಕುರಿತು ಚರ್ಚೆ ನಡೆಸಿದ್ದರು. ಮಲ್ಟಿಪ್ಲೆಕ್ಸ್ಗಳು ಜನರಿಂದ ಭಾರಿ ಮೊತ್ತದ ಟಿಕೆಟ್ ದರವನ್ನು ಪಡೆಯುತ್ತಿವೆ, ಇದರಿಂದ ಚಿತ್ರರಂಗಕ್ಕೆ ಮತ್ತು ಸಿನಿಮಾ ಪ್ರೇಕ್ಷಕರಿಗೆ ಸಮಸ್ಯೆ ಆಗುತ್ತಿದೆ ಎಂದು ಮನವಿ ಮಾಡಿದ್ದರು. ಹೀಗಾಗಿ ಮಲ್ಟಿಪ್ಲೆಕ್ಸ್ಗಳ ಟಿಕೆಟ್ ದರದ ಮೇಲೆ ನಿಯಂತ್ರಣ ಹೇರುವಂತೆ ಸಿದ್ದರಾಮಯ್ಯ ನಿರ್ದೇಶನದ ಮೇರೆಗೆ ವಾರ್ತಾ ಇಲಾಖೆ ಆದೇಶ ಹೊರಡಿಸಿತ್ತು. ಆದರೆ, ಮಲ್ಟಿಪ್ಲೆಕ್ಸ್ ಗಳು ನ್ಯಾಯಾಲಯದಲ್ಲಿ ತಡೆ ತಂದಿದ್ದರು. ಆದರೆ ಈಗ ಆ ತಡೆ ಆದೇಶ ರದ್ದಾಗಿದೆ. ಹೀಗಾಗಿ ಹೊಸ ಆದೇಶದ ಅವಶ್ಯಕತೆ ಇದೆ ಎಂದಿದ್ದಾರೆ.
ಮಾಜಿ ಅಧ್ಯಕ್ಷ ಸಾರಾ ಗೋವಿಂದು ಮಾತನಾಡಿ, ‘ಮಲ್ಟಿಪ್ಲೆಕ್ಸ್ಗಳು ಮನಸೋಇಚ್ಛೆ ಟಿಕೆಟ್ ದರ ವಸೂಲಿ ಮಾಡುತ್ತಿವೆ. ಇತ್ತೀಚೆಗೆ ಬಿಡುಗಡೆ ಆದ ರಜನೀಕಾಂತ್ ಸಿನಿಮಾಕ್ಕೆ 1500-2000 ರೂ. ಟಿಕೆಟ್ ವಿಧಿಸಲಾಗಿತ್ತು. ಹೀಗಾಗಿ ಬೇರೆ ಸಿನಿಮಾಗಳಿಗೆ ಸಮಸ್ಯೆ ಆಗಿತ್ತು. ಎಲ್ಲ ಚಿತ್ರ ಮಂದಿರಗಳಿಗೂ ಒಂದೇ ಟಿಕೆಟ್ ದರ ಇರಬೇಕು ಎಂಬುವುದು ನಮ್ಮ ಬೇಡಿಕೆ ಎಂದಿದ್ದಾರೆ.