ಹಾವೇರಿ: ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ಈಗಾಗಲೇ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಆದರೆ, ಶಿಗ್ಗಾಂವಿ ಕ್ಷೇತ್ರ ಕಾಂಗ್ರೆಸ್ ಗೆ ತಲೆನೋವಾಗಿತ್ತು. ಕಾಂಗ್ರೆಸ್ ನ ಇಬ್ಬರು ನಾಯಕರು ಟಿಕೆಟ್ ಸಿಗದಿದ್ದಕ್ಕೆ ಆಕ್ರೋಶಗೊಂಡು ಅಖಾಡಕ್ಕೆ ಇಳಿದಿದ್ದು, ಇಂದು ಅದು ಶಮನವಾಗಿದೆ ಎನ್ನಲಾಗುತ್ತಿದೆ.
ಶಿಗ್ಗಾವಿ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಿದ್ದಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಈಗಾಗಲೇ ಬಿಜೆಪಿಯಿಂದ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಕಣಕ್ಕೆ ಇಳಿದಿದ್ದಾರೆ. ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗೆ ಭಾರೀ ಪೈಪೋಟಿ ಇತ್ತು. ಅಂತಿಮವಾಗಿ ಗುರುವಾರ ಯಾಸೀರ್ ಅಹ್ಮದ್ ಖಾನ್ ಪಠಾಣ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಿಸಿತ್ತು. ಟಿಕೆಟ್ ಆಕಾಂಕ್ಷಿಯಾಗಿದ್ದ ಅಜ್ಜಂಪೀರ್ ಖಾದ್ರಿ, ಮಂಜುನಾಥ್ ಕುನ್ನೂರು ಸಹ ಭಿನ್ನಾಭಿಪ್ರಾಯದ ಹಿನ್ನಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಈ ಬಂಡಾಯ ಶಮನಗೊಳಿಸಲು ಸ್ವತಃ ಸಿದ್ದರಾಮಯ್ಯ ಎಂಟ್ರಿಯಾಗಿದ್ದಾರೆ. ಅವರು ಬೆಂಗಳೂರಿನ ಗೃಹ ಕಚೇರಿಯಲ್ಲಿ ಅಜ್ಜಂಪೀರ್ ಖಾದ್ರಿ ಭೇಟಿಯಾಗಿ ಮಾತುಕತೆ ನಡೆಸಿದರು. ಆದರೆ, ಸಿಎಂ ಮಾತಿಗೆ ಅಜ್ಜಂಪೀರ್ ಒಪ್ಪಿಲ್ಲ ಎನ್ನಲಾಗಿದೆ. ಹೀಗಾಗಿ ಅಜ್ಜಂಪೀರ್ ಖಾದ್ರಿ ಮನವೊಲಿಕೆ ಮಾಡುವ ಹೊಣೆಯನ್ನು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್‌ಗೆ ನೀಡಿದ್ದಾರೆ. ಈಗ ಅಜ್ಜಂಪೀರ್,”ಕಾಂಗ್ರೆಸ್ ಅಭ್ಯರ್ಥಿಯೇ ನಾಮಪತ್ರ ವಾಪಸ್ ಪಡೆದು ನನಗೆ ಬೆಂಬಲ ನೀಡಿಲಿ ಎಂದಿದ್ದಾರೆ ಎನ್ನಲಾಗಿದೆ. ಆದರೆ, ಯಾವುದು ಖಚಿತ ಮಾಹಿತಿ ಹೊರ ಬಿದ್ದಿಲ್ಲ.