ಹಾಸನ: ಹಾಸನಾಂಬೆ ತಾಯಿಯ ದರ್ಶನಕ್ಕೆ ಜನ ಸಾಗರ ಹರಿದು ಬರುತ್ತಿದೆ.
ಸಾರ್ವಜನಿಕ ದರ್ಶನದ ಮೊದಲ ದಿನವೇ ಜನರು ಸಾಗರೋಪಾದಿಯಲ್ಲಿ ಹರಿದು ಬಂದಿದ್ದರು. ಸರ್ವಾಲಂಕಾರ ಭೂಷಿತೆಯಾಗಿರುವ ದೇವಿಯನ್ನು ಕಣ್ತುಂಬಿಕೊಂಡ ಭಕ್ತರು, ಗರ್ಭಗುಡಿಯಲ್ಲಿ ಎಂದೂ ಆರದ ದೀಪ ಕಂಡು ದೇವಿಯಲ್ಲಿ ಪ್ರಾರ್ಥಿಸಿದರು. ಈ ವೇಳೆ ಗಣ್ಯರು ಕೂಡ ಆಗಮಿಸಿದ್ದರು.
ದೇಗುಲದ ಬಾಗಿಲು ತೆರೆದು ದೇಗುಲದ ಸ್ವಚ್ಛತೆ, ದೇವಿಗೆ ಅಲಂಕಾರ ಮತ್ತು ನೈವೇದ್ಯ, ಪೂಜೆಗಳ ಬಳಿಕ ಶುಕ್ರವಾರ ಬೆಳಗ್ಗೆ 4 ರಿಂದ ಹಾಸನಾಂಬೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಮದ್ಯರಾತ್ರಿಯಿಂದಲೇ ಸರತಿ ಸಾಲಿನಲ್ಲಿ ಬಂದ ಸಹಸ್ರಾರು ಭಕ್ತರು ದೇವಿಯನ್ನು ಕಣ್ತುಂಬಿಕೊಂಡು ಪುನೀತರಾಗಿದ್ದಾರೆ.
ಶುಕ್ರವಾರವಾದ್ದರಿಂದ ಶಕ್ತಿ ದೇವತೆ ದರ್ಶನಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಹೀಗಾಗಿ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಹಾಸನಾಂಬೆಗೆ ನಮಿಸಿದರು. ಮೊದಲ ದಿನವೇ ಬೆಳ್ಳಂಬೆಳಗ್ಗೆ ಆಗಮಿಸಿದ್ದ ಮೈಸೂರಿನ ರಾಜಮಾತೆ ಪ್ರಮೋದಾ ದೇವಿ, ಶತಾಯುಷಿ ಸಾಲುಮರದ ತಿಮ್ಮಕ್ಕ ಹಾಗೂ ಪರಿಷತ್ ಸದಸ್ಯರಾದ ಬೋಜೇಗೌಡ, ಸೂರಜ್ ರೇವಣ್ಣ ಸೇರಿದಂತೆ ಹಲವರು ಆಗಮಿಸಿ ದರ್ಶನ ಪಡೆದಿದ್ದಾರೆ.
ದೇವಿಯ ದರ್ಶನವು ಗುರುವಾರದಿಂದ ಆರಂಭವಾಗಿದ್ದು, ಶುಕ್ರವಾರದಿಂದ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಪ್ರತಿ ದಿನ ಬೆಳಗ್ಗೆ 4ರಿಂದ ರಾತ್ರಿ 8ರ ವರೆಗೆ ದರ್ಶನಕ್ಕೆ ವಕಾಶ ನೀಡಲಾಗಿದೆ. ಈ ಬಾರಿಯೂ ಸುಮಾರು 20 ರಿಂದ 25 ಲಕ್ಷದಷ್ಟು ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಒಟ್ಟು 9 ದಿನಗಳ ಕಾಲ ಭಕ್ತರಿಗೆ ಹಾಸನಾಂಬೆ ದರ್ಶನ ಭಾಗ್ಯ ಕರುಣಿಸಲಿದ್ದಾರೆ.