ವಿಜಯಪುರ: ರೈತರು ಜಮೀನುಗಳ ಪಹಣಿಯಲ್ಲಿ ವಕ್ಫ್ ಮಂಡಳಿ ಹೆಸರು ಕಾಣಿಸಿಕೊಂಡಿದ್ದು, ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ರೈತರ ಜಮೀನುಗಳಲ್ಲಿನ ಪಹಣಿ ಪತ್ರದಲ್ಲಿನ ಕಾಲಂ ನಂಬರ್ 11ರ ಋಣಗಳು ಕಾಲಂನಲ್ಲಿ “ಕರ್ನಾಟಕ ವಕ್ಫ್ ಬೋರ್ಡ್ ಬೆಂಗಳೂರು ಮಸಜಿತ್ (ಸುನ್ನಿ) ವಕ್ಫ್” ಎಂದು ನಮೂದಿಸಲಾಗಿದೆ. ರೈತರ ಜಮೀನಿನ ಮೇಲೆ ವಕ್ಫ್ ಬೋರ್ಡ್ ಸಾಲ ಪಡೆದುಕೊಂಡು ಭೋಜ ಹಾಕಿಸಿದೆ. ಹೀಗಾಗಿ ಸಾಲ ಸಿಗದೆ ರೈತರು ಕಂಗಾಲಾಗಿದ್ದಾರೆ.
ಇಂಡಿ ತಾಲೂಕಿನ ತೆನ್ನಿಹಳ್ಳಿ ಗ್ರಾಮದ ಯಮನಪ್ಪ ಕೆಂಗನಾಳ ಅವರ ಜಮೀನಿನ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಸೇರಿಕೊಂಡಿದೆ. ರೈತ ಯಮನಪ್ಪ ಕೆಂಗನಾಳ ಅವರಿಗೆ ಯಾವುದೇ ತಿಳವಳಿಕೆ ಪತ್ರ ನೀಡದೆ, ತಹಸೀಲ್ದಾರ್ ಏಕಾಏಕಿ ಪಹಣಿ ಪತ್ರದಲ್ಲಿ ವಕ್ಫ್ ಬೋರ್ಡ್ ಎಂದು ಹೆಸರು ಸೇರಿಸಿದ್ದಾರೆ. ಇದರಿಂದಾಗಿ ರೈತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
13 ತಾಲೂಕು ರೈತರಿಗೆ ನಿಮ್ಮ ಜಮೀನುಗಳು ವಕ್ಫ್ ಬೋರ್ಡ್ ಆಸ್ತಿಯೆಂದು” ಆಯಾ ತಹಸೀಲ್ದಾರ್ ಕಚೇರಿಯಿಂದ ತಿಳವಳಿಕೆ ಪತ್ರ ನೀಡಲಾಗಿದೆ. ಇದಲ್ಲದೇ, ಇನ್ನೂ ನೂರಾರು ರೈತರಿಗೆ ನೊಟೀಸ್ ಜಾರಿ ಮಾಡಲು ಮಾಡಲು ತಹಸೀಲ್ದಾರ್ ಸಿದ್ಧತೆ ನಡೆಸಿದ್ದಾರೆ ಎಂದು ಕೂಡ ತಿಳಿದು ಬಂದಿದೆ. ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿನ 1200 ಎಕರೆ ಜಮೀನು ಶಾ ಅಮೀನುದ್ದೀನ್ ದರ್ಗಾಕ್ಕೆ ಸೇರಿದ್ದು ಎಂದು ತಹಸೀಲ್ದಾರ್ ರೈತರಿಗೆ ನೋಟಿಸ್ ನೀಡಿದ್ದಾರೆ. ಆದರೆ ನಮ್ಮ ಗ್ರಾಮದಲ್ಲಿ ಶಾ ಅಮೀನುದ್ದೀನ್ ದರ್ಗಾ ಇಲ್ಲ ಎಂದು ರೈತರು ಹೇಳಿದ್ದಾರೆ.
ಹಿಂದೂಗಳ ಜಮೀನುಗಳ ಮೇಲೆ ಈ ರೀತಿ ವಕ್ಫ್ ಎಂದು ನಮೂದಾಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.